ಕರಿಸಿರಿಯಾನ ಎಂಬ ಹೆಸರನ್ನು ಕೇಳಿ ಒಮ್ಮೆ ಗೊಂದಲವಾದರೂ ಕೊನೆಗೆ ಓದಿ ಮುಗಿಸಿದಾಗ ಹೆಸರಿನ ಒಳಾರ್ಥ ತಿಳಿಯಿತು. ಕರಿ ಎಂದರೆ ಆನೆ, ಸಿರಿ ಎಂದರೆ ಏನು ಎಂದು ವಿವರಿಸುವುದೇನೂ ಬೇಕಿಲ್ಲ, ಐಶ್ವರ್ಯ ಎಂದು ಅರ್ಥ. ಇನ್ನು ಯಾನ ಎಂದರೆ ಪಯಣ. ಆನೆಯ ಮೇಲೆ ಐಶ್ವರ್ಯದ ಪಯಣ. ಇವರ ಎಲ್ಲಾ ಪುಸ್ತಕಗಳ ಹೆಸರುಗಳೂ ಹೀಗೆ ಪ್ರಾರಂಭವಾಗುವುದು ವಿಶೇಷ(ಉದಾಹರಣೆಗೆ: ಕನಕ ಮುಸುಕು, ಕಪಿಲಿಪಿಸಾರ ಇತ್ಯಾದಿ).ಜೊತೆಗೆ ಥ್ರಿಲ್ಲರ್ ರೀತಿಯಲ್ಲಿಯೇ ಓಡಿಸಿಕೊಂಡು ಹೋಗುವ ಈ ಪುಸ್ತಕದಲ್ಲಿನ ಕಥಾನಾಯಕಿ ಪೂಜಾ ನನಗೆ ತುಂಬಾ ಇಷ್ಟಪಟ್ಟ ಪಾತ್ರ .ಇತಿಹಾಸವನ್ನು ಇಷ್ಟು ಕುತೂಹಲಕಾರಿಯಾಗಿ ವಿವರಿಸಲು ಸಾಧ್ಯವೆಂದು ನಾನು ಎಂದೂ ಯೋಚಿಸಿರಲಿಲ್ಲ.ಜೊತೆಗೆ historical fiction ಗಳನ್ನು ಮೊದಲ ಬಾರಿ ನಾನು ಓದಲು ಪ್ರಯತ್ನಿಸಿದ್ದು.ನನಗೆ ಇತಿಹಾಸದ ಬಗ್ಗೆ ಕುತೂಹಲ ಹುಟ್ಟಲು ಈ ಪುಸ್ತಕಗಳೆ ಕಾರಣವಾಗಿದ್ದು ಸುಳ್ಳಲ್ಲ.
ಕರಿಸಿರಿಯಾನದ ನಂತರ ನನ್ನ ಹತ್ತಿರದ ಊರಿನದೇ ರಾಣಿಯಾಗಿದ್ದರೂ ಅಪರಿಚಿತವಾಗಿಯೇ ಉಳಿದಿದ್ದ ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿಯ ಬಗ್ಗೆ ಇದ್ದ ಇದೇ ಕರಿಸಿರಿಯಾನದ ಪಾತ್ರಗಳನ್ನೇ ಇಟ್ಟುಕೊಂಡು ಬರೆದಿರುವ ಬಳ್ಳಿಕಾಳಬೆಳ್ಳಿ ಓದಿದೆ. ನನಗೆ ಗೇರುಸೊಪ್ಪದಲ್ಲಿ ಒಬ್ಬ ರಾಣಿಯೂ ಇದ್ದಳು ಎಂದೂ ತಿಳಿದಿರಲಿಲ್ಲ. SS Gerusoppa ಎಂಬ ಹಡಗಿನಲ್ಲಿದ್ದ ಬೆಳ್ಳಿ, ಕಾಡಿನಲ್ಲಿ ಸಿಗುತ್ತಿದ್ದ ಬಳ್ಳಿಕಾಳು ಎಲ್ಲವೂ ಮರೆತುಹೋಗಿದ್ದ ರಾಣಿಯ ಕಥೆಯನ್ನು ಮತ್ತೆ ನೆನಪಿಸಿದಂತಿದೆ. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋದ ಪುಸ್ತಕ. ಉತ್ತರಕನ್ನಡ ಮತ್ತು ಪೋರ್ಚುಗೀಸರ ನಡುವಿನ ಸಂಬಂಧ, ಚೆನ್ನಭೈರಾದೇವಿಯ ಆಡಳಿತ ಎಲ್ಲವೂ ನನಗೆ ಹೊಸ ವಿಷಯಗಳೆ. ನನ್ನೂರನ್ನೂ ಒಂದಾನೊಂದು ಕಾಲದಲ್ಲಿ ಆಳಿದ್ದ ರಾಣಿಯ ಬಗ್ಗೆ ಓದಿದ್ದು ತುಂಬಾ ಖುಷಿ ಕೊಟ್ಟಿತು.
ಈ ಪುಸ್ತಕಗಳ ನಂತರ ನಾನು ಗಣೇಶಯ್ಯನವರೆ ಬರೆದ, ಆಗ ತಾನೇ ಬಿಡುಗಡೆಯಾಗಿದ್ದ ಸಸ್ಯ ಸಗ್ಗ ಓದಲು ಶುರು ಮಾಡಿದೆ. ನನಗೆ ತುಂಬಾ ಇಷ್ಟವಾದ ಪುಸ್ತಕಗಳಲ್ಲಿ ಇದೂ ಒಂದು.ಗಿಡಗಳಲ್ಲೂ ಇರುವ ಸೋದರದ್ವೇಷ, ತಾಯಿಮಕ್ಕಳ ಕಲಹ ಇತ್ಯಾದಿಗಳ ಬಗ್ಗೆ ಸರಳವಾಗಿ ಅರ್ಥವಾಗುವ ಹಾಗೆ ಬರೆದಿರುವ ಪುಸ್ತಕ. ಪುಸ್ತಕ ಮೊದಲು ಯಾರು ಓದುವುದೆಂದು ಮನೆಯಲ್ಲೂ ತಾಯಿ ಮಕ್ಕಳ ಕಲಹ ಒಮ್ಮೆ ನುಸುಳಿ ಬಂದಿದ್ದಂತೂ ಹೌದು. ಬೀನ್ಸ್ಗಳನ್ನು ಕಂಡಾಗ ನಾನು ಅದರಲ್ಲಿ ಓದಿದ್ದು ನೆನಪಾಗುತ್ತದೆ. ಒಂದು ಓದಲೇಬೇಕಾದ ಪುಸ್ತಕ. ಒಮ್ಮೆ ಈ ಪುಸ್ತಕ ಓದಿದ ನಂತರ ನನಗೆ ತಾರುಮಾರು,ಬಿನ್ನ ಬಿಂಬ ಮುಂತಾದ ಪುಸ್ತಕಗಳ ಬಗ್ಗೆ ಆಸಕ್ತಿ ಹುಟ್ಟಿತು. ಲೇಖನಗಳನ್ನು ಓದಲು ಶುರು ಮಾಡಿದೆ. ಈ ಪುಸ್ತಕಗಳ ನಂತರ ನಾನು ಮತ್ತೆ fiction ಗಳಿಗೆ ಹಿಂದಿರುಗಿದೆ. ಅಮ್ಮ ಮೊದಲು ಸುಧಾದಲ್ಲಿ ದಾರಾವಾಹಿ ರೂಪದಲ್ಲಿ ಬರುತ್ತಿದ್ದ ಈಗ ಪುಸ್ತಕವಾಗಿರುವ ಕನಕ ಮುಸುಕುವಿನ ಬಗ್ಗೆ ಹೇಳಿದಳು. ಅದಾಗಲೇ historical fictionಗಳನ್ನು ಇಷ್ಟಪಡಲು ಪ್ರಾರಂಭಿಸಿದ್ದ ನಾನು ಖುಷಿಯಿಂದ ಓದಲು ಪ್ರಾರಂಭಿಸಿದೆ. ಮುಸುಕಿನ ಜೋಳ ಮೊದಲೇ ಭಾರತದಲ್ಲಿ ಇತ್ತೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದು ಇದೆ ಪುಸ್ತಕ. ಈ ಪುಸ್ತಕ ಮುಗಿಯುತ್ತಿದ್ದಂತೆ ನಾನು ಚಿತಾದಂತ, ಶಿಲಾಕುಲವಲಸೆ,ಮೂಕಧಾತು, ಏಳು ರೊಟ್ಟಿಗಳು ಮುಂತಾದ ಎಲ್ಲಾ fictionಗಳನ್ನೂ ಓದಿ ಮುಗಿಸಿದೆ.
ಚಿತಾದಂತವನ್ನು ಅದೆಷ್ಟು ಸಾರಿ ಓದಿದೆನೋ ಗೊತ್ತಿಲ್ಲ. ನಾವು ಶಾಲೆಯ ಪಠ್ಯ ಪುಸ್ತಕದಲ್ಲಿ 'ಅಶೋಕನನ್ನು ದೇವಾನಾಂಪ್ರಿಯ ಪ್ರಿಯದರ್ಶಿ ಎಂದು ಕರೆಯುತ್ತಾರೆ. ಅವನು ಪ್ರಜೆಗಳೆ ತನ್ನ ಮಕ್ಕಳಿದ್ದಂತೆ ಎಂದು ಹೇಳಿದನು. ಅಶೋಕನು ತನ್ನ ಮಕ್ಕಳಾದ ಮಹೀಂದ್ರ ಮತ್ತು ಸಂಘಮಿತ್ತ ರನ್ನು ಧರ್ಮಪ್ರಚಾರಕ್ಕೆ ಶ್ರೀಲಂಕೆಗೆ ಕಳುಹಿಸಿದ 'ಎಂದು 5 ನೇ ತರಗತಿಯಿಂದ ಓದಿ ಸಾಕಾಗಿದ್ದ ನನಗೆ ಈ ಪುಸ್ತಕ ಅಶೋಕನು ಒಳ್ಳೆಯ ರಾಜನೋ ಅಥವಾ ಕೆಟ್ಟ ರಾಜನೋ ಎಂಬ ಜಿಜ್ಞಾಸೆಯಸನ್ನು ಹುಟ್ಟುಹಾಕಿತು. ಏನೇ ಆದರೂ ಅಶೋಕ ಮಾತ್ರ ನನಗೆ ತುಂಬಾ ಇಷ್ಟವಾದ, ಕುತೂಹಲ ಮೂಡಿಸಿದ ಇತಿಹಾಸದ ಒಂದು ಭಾಗವಾಗಿಯೇ ಉಳಿದಿದ್ದಾನೆ.
ವಿಶೇಷವೆಂದರೆ ಮೇಲೆ ಹೇಳಿದ ಎಲ್ಲಾ ಪುಸ್ತಕಗಳ ಕಥಾನಾಯಕಿ ಪೂಜಾ ಒಬ್ಬ archeologist. ಇದು ಒಂದು ಸಿರೀಸ್ ರೀತಿಯಲ್ಲಿಯೇ ಮುಂದುವರೆದಿದೆ. ನನಗೆ ಏಳು ರೊಟ್ಟಿಗಳು,ರಕ್ತಸಿಕ್ತ ರತ್ನಗಳನ್ನು ಓದುವಾಗ ಮೊದಲಿನ ಪಾತ್ರ ಪೂಜಾಳನ್ನು ಮಿಸ್ ಮಾಡಿಕೊಂಡಿದ್ದು ಸುಳ್ಳಲ್ಲವಾದರೂ ಈ ಹೊಸ ಪಾತ್ರಗಳೂ ಇಷ್ಟವಾದವು.
ಇಷ್ಟು ದಿನವಾದರು ಯಾಕೋ ಕಥಾಸಂಕಲನಗಳ ಸುದ್ದಿಗೆ ಹೋಗಿರಲಿಲ್ಲ. ಮನೆಗೆ ಪುಸ್ತಕ ತೆಗೆದುಕೊಂಡು ಹೋಗಲು ಬಂದಿದ್ದ ಒಬ್ಬರು ನಾನು ಮೂಕಧಾತು ಓದುತಿದ್ದದ್ದನ್ನು ನೋಡಿ ಕಥಾಸಂಕಲನಗಳನ್ನೂ ಓದು ಎಂದು ಸಲಹೆ ನೀಡಿದರು. ಸರಿ ಓದೋಣವೆಂದು ಸಿಗೆರಿಯ ಪುಸ್ತಕವನ್ನು ಹಿಡಿದು ಕುಳಿತೆ.ಅದೇ ಒಂದು ವಾರದಲ್ಲಿ ಮತ್ತೆ ಉಳಿದ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿದೆ. ನನಗೆ ಇತಿಹಾಸದಲ್ಲಿ ಎಂದೂ ಇಲ್ಲದ ಆಸಕ್ತಿಯನ್ನು ತಂದುಕೊಟ್ಟಿದ್ದು ಕೆ.ಎನ್.ಗಣೇಶಯ್ಯನವರ ಪುಸ್ತಕಗಳು.
2020 ರಲ್ಲಿ ನಾನು ಶಾಲೆಯಲ್ಲಿದ್ದರೆ ಏನು ಕಲಿಯುತ್ತಿದ್ದನೋ ಅದನ್ನೇ ಇನ್ನೂ ಆಸಕ್ತಿದಾಯಕವಾಗಿ, ಖುಷಿಯಿಂದ ಕಲಿತಿದ್ದೆ. ಕಲಿಕೆ ಹೊಸರೀತಿಯಲ್ಲಿ ಆಯಿತು ಅಷ್ಟೇ! ಇತಿಹಾಸ ಎಂದರೆ ಬರೀ ಇಸವಿಗಳನ್ನು ಉರು ಹೊಡೆಯುವುದಲ್ಲ ಎಂದು ನೆನಪಿಸಿದ್ದು ಕೆ. ಎನ್. ಗಣೇಶಯ್ಯನವರ ಪುಸ್ತಕಗಳು, ಮತ್ತು ಇತಿಹಾಸವನ್ನು ಓದುವಂತೆ ಮಾಡಿದ ಲಾಕ್ ಡೌನ್!
PLEASE FILL OUT THIS BLOG SURVEY!
Nice writing
ReplyDeleteNice
ReplyDeletethanks
Deleteತುಂಬಾ ಚೆನ್ನಾಗಿದೆ
ReplyDeletethank you
DeleteOh, I must've missed this post! I really like your blog graphics, Vanya! Great post :)
ReplyDeleteThanks Maya
Delete