Skip to main content

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?
 ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ. 
     ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?
      ಈಗ ಜಾಗತಿಕ ವಿಷಯಗಳನ್ನು ನೋಡಿದರೆ ೨೦-೨೫ ವರ್ಷಗಳಲ್ಲಿ ಸಾಧಿಸಲಾಗದನ್ನು ಒಂದು ವೈರಸ್  ಒಂದು ತಿಂಗಳಲ್ಲಿ ಮಾಡಿದೆ. ೧೫ ವರ್ಷಗಳ ಕಾಲ ಮಾನವ ಪ್ರಯತ್ನದಿಂದ ರಿಪೇರಿ ಮಾಡಲಾಗದಿದ್ದ ಓಜ಼ೊನ್ ಪದರ ೧೫ ದಿನಗಳಲ್ಲಿ  ಸರಿಯಾಗಿಬಿಟ್ಟಿದೆ. ಕಣ್ಣಿಗೆ ಕಾಣದ ವೈರಸ್,  ನಿಸರ್ಗವನ್ನು ಕೊಳ್ಳೆ ಹೊಡೆಯುತ್ತಿದ್ದ  ಧನಿಕ ದೇಶಗಳನ್ನೇ ಸ್ತಭ್ದ ಮಾಡಿಬಿಟ್ಟಿದೆ. ಭೂಮಿ ತನ್ನ ಗಾಯವನ್ನು ಸರಿಮಾಡಿಕೊಳ್ಳುತ್ತಿದೆಯೆ? 
    ಇಂತಹ ಪ್ರಶ್ನೆಗಳ ಹಿಂದೆ ಬಿದ್ದು ಭೂಮಿಯೂ ಒಂದು ಜೀವಿ , ಅದರ ಅಂಗಾಂಗಗಳು ಈ ಭೂಮಿಯಲ್ಲಿ ವಾಸಿಸುವ ಜೀವಿಗಳು ಎನ್ನುವ ಒಂದು ತತ್ವವಿದೆ. ಅದೇ ಗಾಯಾ ಸಿದ್ಧಾಂತ. 
  
ಗಾಯಾ ಸಿದ್ಧಾಂತ ಎಂದರೇನು?:  ಈ ಸಿದ್ಧಾಂತ ಹೇಳುವುದು   ಪರಿಸರಕ್ಕೆ ಅನುಗುಣವಾಾಗಿ    
ಜೀವಿಗಳು ರೂಪುಗೊಂಡಿಲ್ಲ. ಬದಲಾಗಿ ಜೀವಿಗಳಿಗೆ ಅನುಗುಣವಾಗಿ  ಪರಿಸರ ರೂಪುಗೊಂಡಿದೆ. ಜೀವಿಗಳಿಗೆ ಹೇಗೆ ಅಂಗಾಂಗಳು ಇರುತ್ತದೆಯೋ, ಹಾಗೆಯೇ ಭೂಮಿಗೆ ಜೀವಿಗಳು ಅಂಗಾಂಗಗಳಂತೆ. ಜೀವಿಗಳ ಸಮೂಹ ಸೇರಿ ಪರಿಸರವನ್ನು ನಡೆಸುತ್ತವೆ. ಮತ್ತು ಜೀವಿಗಳಿಗೆ ಗಾಯವಾದಾಗ ಹೇಗೆ ಗುಣವಾಗುತ್ತದೆಯೋ , ಹಾಗೆಯೇ  ಭೂಮಿಯೂ ಸಹ ತನಗಾದ ಗಾಯಗಳನ್ನು ತನ್ನದೇ ರೀತಿಯಲ್ಲಿ ಸರಿಪಡಿಸಿಕೊಳ್ಳುತ್ತದೆ. ನಮ್ಮ ದೇಹದಲ್ಲಿ ಜೀವಕೋಶಗಳು ಸತ್ತ ನಂತರ ಹೊಸ ಜೀವಕೋಶಗಳು ಸೃಷ್ಟಿಯಾಗುತ್ತವೆಯಲ್ಲವೇ? ಇದನ್ನು  homeostasis  ಎಂದು ಕರೆಯುತ್ತಾರೆ. 
 
ಗಾಯಾ ಸಿದ್ಧಾಂತ ನಾಗರೀಕತೆಯ ಆರಂಭದಿಂದಲೂ ಬೆಳವಣಿಗೆಯಾಗುತ್ತಾ ಬಂದಿರುವ ಸಿದ್ಧಾಂತ.  ಒಂದು ದೃಷ್ಟಿಯಿಂದ ಪಂಚಭೂತಗಳು, ಗ್ರೀಕಿನ ಗಾಯಾ, ರೊಮಿನ ಟೆರ್ರಾ ಗಳ ಆಧುನಿಕ ವರ್ಶನ್ ಈ ಗಾಯಾ ಸಿದ್ಧಾಂತ.
 
ಗಾಯಾ ಎಂದರೆ ಯಾರು? :  ಗಾಯಾ  ಎಂಂದರೆ
 ಗ್ರೀಕ್‌ ನಾಗರೀಕತೆಯ ಒಂದು ದೇವತೆ. ನಮ್ಮ ಸಿಂಧೂ ನಾಗರಿಕತೆಯಲ್ಲಿ ಹೇಗೆ ಪಂಚ ಭೂತಗಳಿವೆಯೊ ಹಾಗೆಯೆ. ಮಾನವ ವಿಕಾಸವಾದ ಹಾಗೆಯೆ ತನ್ನ ಯೋಚನೆಗೆ ಮೀರಿದ  ನಿಸರ್ಗದ ನಿಯಮಗಳನ್ನು ಶಕ್ತಿಯಾಗಿ ನೋಡಿದ.ಈ ರೀತಿಯ ದೇವತೆಗಳ ಕಲ್ಪನೆಯನ್ನು ಸಾಮಾನ್ಯವಾಗಿ ಎಲ್ಲಾ   ನಾಗರೀಕತೆಗಳಲ್ಲೂ  ಕಾಣಬಹುದು. ಉದಾಹರಣೆಗೆ ರೊಮನ್ ನಾಗರೀಕತೆಯಲ್ಲಿ ಭೂಮಿತಾಯಿ ಎಂದು ಟೆರ್ರಾ ದೇವತೆಯನ್ನು ಸೂಚಿಸಿದರೆ, ಅಜ್ಟೆಕ್ ನಾಗರೀಕತೆಯಲ್ಲಿ ಪ್ರಕೃತಿಯನ್ನು ಶಕ್ತಿ ರೂಪದಲ್ಲಿ ಪೂಜಿಸಿದರು. ಮಾನವ ವಿಕಾಸವಾದಂತೆ ಆತನ ದೇವರ ಬಗೆಗಿನ ಕಲ್ಪನೆಗಳೂ ವಿಸ್ತಾರವಾಗುತ್ತಾ ಹೋಯಿತು. 
ಕಾಕತಾಳೀಯವೆಂಬಂತೆ ಯಾರಾದರೂ ತೀರಿಕೊಂಡ ಮೇಲೆ ಪಿಂಡ ಪ್ರದಾನ ಮಾಡಲು ಗಯಾಕ್ಕೆ ಹೋಗಬೇಕು ಎನ್ನುತಾರೆ. ಅದಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೆ ಗೊತ್ತಿಲ್ಲ!

     ೧೯೬೦ ರಲ್ಲಿ  ನಾಸಾ ಮಂಗಳ ಗ್ರಹದ ಮೇಲೆ ಜೀವ ಉಗಮವಾಗಿದೆಯೆ ಎಂದು ಪರೀಕ್ಷಿಸಲು ಬ್ರಿಟನ್ನಿನ ವಿಜ್ನಾನಿ ಜೇಮ್ಸ್ ಲವ್ಲಾಕ್( James Lovelock) ಎಂಬ ವಿಜ್ಞಾನಿಯನ್ನು ಕರೆಸಿತು. ಆತ ಒಂದು ಸುಲಭ ವಿಧಾನದಿಂದ ಮಂಗಳನಲ್ಲಿ ಜೀವ ಇಲ್ಲ ಎಂದು ತೋರಿಸಿದ. ಒಂದು ಸ್ಪೆಕ್ಟ್ರೊಮೀಟರ್ ನ ಸಹಾಯದಿಂದ ಮಂಗಳ ಗ್ರಹದ ವಾತಾವರಣದಲ್ಲಿ ಜೀವ ಉಗಮವಾಗಿಲ್ಲ ಎಂದು ಹೇಳಿದ.ಆದರೆ ನಾಸಾಕ್ಕೆ ಈ ತತ್ವ ಒಪ್ಪಿಗೆಯಾಗಲ್ಲಿಲ್ಲವಾದ್ದರಿಂದ ಆತನನ್ನು ವಾಪಸು ಕಳುಹಿಸಿತು.
    ವಾಪಸು ಬಂದ ನಂತರ ಲವ್ ಲಾಕ್ ತನ್ನ ತತ್ವದ ಮೇಲೆ ಕೆಲಸ ಮಾಡುತ್ತ ಭೂಮಿಯೂ ಒಂದು ಜೀವಿಯಂತೆ ಅಂದರೆ ಭೂಮಿಯ ಮೇಲಿನ  ಜೀವಜಾಲವು ಕೆಲಸ ಮಾಡುವಾಗ ಒಟ್ಟಾಗಿ ಒಂದು ಜೀವಿಯಂತೆ ವರ್ತಿಸುತ್ತದೆ  ಎಂಬುದನ್ನು ಗಮನಿಸಿದ. ಒಮ್ಮೆ ತನ್ನ ನೆರೆಯವ  ವಿಲ್ಲಿಯಮ್ ಗೊಲ್ಡಿಂಗ್ನ ಬಳಿ ತನ್ನ ತತ್ವದ ಬಗ್ಗೆ ಚರ್ಚೆ ಮಾಡಿದಾಗ ಆತ ಈ ಸಿದ್ಧಾಂತಕ್ಕೆ  ಗ್ರೀಕ್ ಪುರಾಣದ ದೇವತೆ ಗಾಯ ಎಂಬ ಹೆಸರು ಸೂಚಿಸಿದ. ಹೀಗೆ ಲವ್ಲಾಕ್ ನ ಸಿದ್ಧಾಂತಕ್ಕೆ ಗಾಯಾ ಸಿದ್ಧಾಂತ (gaiya Theory) ಎಂಬ ಹೆಸರು ಬಂತು. 
ಗಾಯಾ ಸಿದ್ಧಾಂತದ ಹೆಸರಿನ ರಾದ್ಧಾಂತ! :  
ಗಾಯಾ ಸಿದ್ಧಾಂತ ಗ್ರೀಕಿನ ದೇವತೆಯ ಹೆಸರಗಿದ್ದರಿಂದ ಇದು ಮೂಡನಂಬಿಕೆಯತ್ತ ಕರೆದೊಯ್ಯುವ ಸಿದ್ಧಾಂತ ಎಂದು ಮೊದಲು ಆಕ್ಷೇಪಗಳು ಬಂದವು. ಗಾಯಾ ಸಿದ್ಧಾಂತ ಮೊದಲಿಂದಲೂ ನಾಗರೀಕತೆಯ ಉಗಮದ ಕಾಲದಿಂದಲೂ ಇದ್ದ ಸಿದ್ಧಾಂತ . ಇದರಲ್ಲಿ ಹೊಸತೇನಿದೆ ಎಂಬ ಆರೋಪಗಳೂ ಹೇರಳವಾಗಿಯೇ ಬಂದವು. ಇದು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಹೋಗುವುದಿಲ್ಲ ಬದಲಾಗಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಹೋಗುತ್ತದೆ ಎಂಬ ವಾದಗಳೂ ಇವೆ. 
ಕೊರೊನಾ ಕೂಡ ಭೂಮಿಯ ಔಷಧಿಯೇ? :  
ಈಗ ಮಹಾಮಾರಿ ಕೊರೊನಾವನ್ನೆ ತೆಗೆದುಕೊಳ್ಳುವ. 
ಇದು ಧನಿಕ ರಾಷ್ಟ್ರಗಳಿಗೆ ಹೆಚ್ಚು ಕಾಡಿದೆ. ಕೊಳ್ಳುಬಾಕತನಕ್ಕೆ ದಾರಿಯಾಗಿದ್ದ ಜಿಡಿಪಿ ದರವನ್ನು ಸೊನ್ನೆಗಿಂತ ಕೆಳಗೆ ತಂದು ಕೂರಿಸಿದೆ.ವರ್ಷಗಳಿಂದ ಸರಿ ಮಾಡಲಾಗದಿದ್ದ ಓಜ಼ೊನ್ ಪದರ ವಾರಗಳಲ್ಲಿ ರಿಪೇರಿಯಾಗಿದೆ. ಇವೆಲ್ಲವನ್ನೂ ನೋಡಿದರೆ ಭೂಮಿಯೂ ಒಂದು ಜೀವಿಯ ರೀತಿ ವರ್ತಿಸುತ್ತಿರುವಂತೆ ಭಾಸವಾಗುತ್ತದೆ. 
   
ಗಾಯಾ ಸಿದ್ಧಾಂತದ ನೆಲೆಗಟ್ಟಿನಲ್ಲಿ ನೋಡಿದರೆ ಭೂಮಿಯೂ ತನಗಾದ ಗಾಯಕ್ಕೆ ಮುಲಾಮು ಹಚ್ಚುತ್ತಿದೆಯಷ್ಟೆ. ಆದರೆ ಭೂಮಿ ಹಚ್ಚಿದ ಮುಲಾಮು ಇಷ್ಟೊಂದು ಉರಿಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ! ನಮಗೆ ಭೂಮಿಯ ಔಷಧಿಯೇ ಬೇಕೇ ಅಥವ ನಾವೆ ಪರಿಹಾರ ಕಂಡುಕೊಳ್ಳೋಣವೇ? ಪರಿಹಾರವೇನೋ ಇದೆ. ಅದನ್ನು ಬಳಕೆಗೆ ತರಬೇಕು ಅಷ್ಟೇ. ಇಲ್ಲದಿದ್ದರೆ ನಮಗೆ ಭೂಮಿಯ ಮುಲಾಮೇ ಗತಿ!!


~ವನ್ಯಾ ಸಾಯಿಮನೆ
 ೯ ನೇ ತರಗತಿ 

Comments

  1. ಪ್ರಿಯ ವನ್ಯಾ, ಗೇಯಾ ಕುರಿತು ತುಂಬ ಚೆನ್ನಾಗಿ ಬರೆದಿದ್ದೀರಿ. ಚಿಕ್ಕದಾದರೂ ಸಮಗ್ರವಾಗಿ ಎಲ್ಲ ವಾದಗಳನ್ನೂ ಪೋಣಿಸಿ, ನಿಮಗೆ ಗೊತ್ತಿಲ್ಲದ್ದನ್ನು ಗುಮಾನಿಯಲ್ಲಿಟ್ಟು (ಗಯಾ) ವಯಸ್ಸಿಗೆ ಮೀರಿದ ಪ್ರೌಢಿಮೆಯನ್ನು ತೋರಿಸಿದ್ದೀರಿ. ಜೇಮ್ಸ್‌ ಲವ್‌ಲಾಕ್‌ ನಡೆಸಿದ ಸಂಶೋಧನೆಗಳಿಗೆ ನಾನೂ ಮನಸೋತಿದ್ದೇನೆ. ಜಲಚಕ್ರದ ಹಾಗೆ, ಕಾರ್ಬನ್‌ ಚಕ್ರ, ನೈಟ್ರೊಜನ್‌ ಚಕ್ರಗಳನ್ನೂ ಆತನಷ್ಟು ದೀರ್ಘವಾಗಿ ವಿವರಿಸಿದವರು ಬೇರೆ ಇಲ್ಲ. ಭೂಮಿಯ ಮೇಲೆ ಕಾರ್ಬನ್‌ ತೀರ ಹೆಚ್ಚಾದಾಗ ಅದನ್ನು ಹೀರಿ ತೆಗೆಯಲೆಂದೇ ಸಮುದ್ರದಲ್ಲಿ ಸಿಂಪಿಚಿಪ್ಪುಗಳು ಸೃಷ್ಟಿಯಾಗಿದ್ದು, ಅವೇ ಮುಂದೆ ಸುಣ್ಣದ ಬಂಡೆಗಳಾಗಿ, ಅಮೃತಶಿಲೆಗಳಾಗಿದ್ದನ್ನು ಗೇಯಾ ಕ್ರಿಯೆಗಳೆಂದೇ ತೋರಿಸಿದ್ದು ಲವ್‌ಲಾಕ್‌. ಅವರ ವಾದಗಳು ಅಧ್ಯಾತ್ಮದತ್ತ, ದೈವಿಕ ಭಕ್ತಿಯತ್ತ ವಾಲಿಬಿಟ್ಟೀತು ಎಂಬ ಕಾರಣದಿಂದಾಗಿ ಅಪ್ಪಟ ವಿಜ್ಞಾನಿಗಳು ಅದನ್ನು ಪ್ರತಿರೋಧಿಸುತ್ತಿದ್ದಾರೆ. ಭೂಮಿಯ ಇಂದಿನ ದುಃಸ್ಥಿತಿಯನ್ನು ಸರಿಪಡಿಸಲು ನಾವೇ ಯತ್ನಿಸಬೇಕೇ ವಿನಾ ದೈವಿಕ ಹಸ್ತಕ್ಷೇಪವನ್ನು ನಿರೀಕ್ಷಿಸಬಾರದು ಎಂಬರ್ಥ ಆ ವಿರೋಧದಲ್ಲಿದೆ. ನನಗೆ ಸಂತಸ ಮತ್ತು ಅಚ್ಚರಿ ತಂದ ಸಂಗತಿ ಏನೆಂದರೆ, ಅಂಥ ಹಳ್ಳಿಯಲ್ಲಿದ್ದರೂ ಗೇಯಾ ಪ್ರಜ್ಞೆ ಅಲ್ಲಿಯವರೆಗೂ ತಲುಪಲು ಸಾಧ್ಯ ಎಂಬುದು ನಿಮ್ಮ ಈ ಬರಹದ ಮೂಲಕ ವ್ಯಕ್ತವಾಗಿದೆ. ನಿಮ್ಮ ನಿರೂಪಣೆಯೂ ಚೆನ್ನಾಗಿದೆ. (ಆದರೆ ಗೌರೀ ಹೂವನ್ನು ತಿಂದ ಕಂಬಳಿಹುಳುವನ್ನು ಇನ್ನಷ್ಟು ಚೆನ್ನಾಗಿ ಪರಿಶೀಲಿಸಿ. ಗೌರೀ ಸಸ್ಯ ತುಂಬ ವಿಷಕಾರಿ (ತಮಿಳು ನಾಡಿನಲ್ಲಿ ಅದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದ ರೈತರು ಸಾಲದ ಬಾಧೆಗೆ ಸಿಕ್ಕು ಅದರ ಬೀಜ/ಗಡ್ಡೆಯನ್ನೇ ತಿಂದು ಆತ್ಮಹತ್ಯೆ ಮಾಡಿಕೊಂಡ ವರದಿಗಳಿವೆ). ಪಕ್ಷಿಗಳಿಂದ ಬಚಾವಾಗಲೆಂದು ಕೆಲವು ಕೀಟಗಳು ಬೇಕಂತಲೇ ಇಂಥ ವಿಷರಸವನ್ನು ಹೀರಿಕೊಂಡು ಬೆಳೆಯುತ್ತವೆ. ಒಮ್ಮೆ ಇದನ್ನು ಭಕ್ಷಿಸಿದ ಪಕ್ಷಿ ನಿಜಕ್ಕೂ ಮತ್ತೊಮ್ಮೆ ಅತ್ತ ಬರುತ್ತದೆಯೇ ಎಂದು ನೋಡಲು ನಿಮಗೆ ಇಲ್ಲಿ ವೈಜ್ಞಾನಿಕ ಪ್ರಯೋಗಕ್ಕೆ ಅವಕಾಶವಿದೆ! ಆಲ್‌ ದ ಬೆಸ್ಟ್‌. ಅಂದಹಾಗೆ, ಇದು ಜೇಮ್ಸ್‌ ಲವ್ಲಾಕ್‌ ಅವರ ನೂರನೆಯ ವರ್ಷವೂ ಹೌದು.

    ReplyDelete
    Replies
    1. ಧನ್ಯವಾದಗಳು ಸರ್. ಆದ್ರೆ ದಯವಿಟ್ಟು ಬಹುವಚನ ಬೇಡ. ಹಾಗೆಯೆ ನೀವು ಹೇಳಿದ ಹಾಗೆ ಗೌರಿ ಹೂವನ್ನು ಇನ್ನೂ ಸರಿಯಾಗಿ ಅವಲೋಕಿಸುತ್ತೇನೆ

      Delete
    2. ಪುಟ್ಟಿ ವನ್ಯ, ನಮ್ಮ ಜಿಲ್ಲೆಯ ಹೆಮ್ಮೆಯ ‘ಪ್ರಕೃತಿ ದೇವರ’(ಶ್ರೀಯುತ ನಾಗೇಶ ಹೆಗಡೆಯವರು) ಪ್ರತಿಕ್ರಿಯೆ ಪಡೆದ ನೀನೇ ಧನ್ಯ. ನಿನ್ನ ಪರಿಸರ ಪ್ರೇಮಕ್ಕೆ ನೂರು ನಮನ. ನಿನ್ನ ಬಳಗ ಹೆಚ್ಚೆಚ್ಚು ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ನಿನ್ನ ಹೆತ್ತು ಹೆಸರಿಟ್ಟವರಿಗೆ ಕೈಮುಗಿದೆ....
      ಸಾಧ್ಯವಾದರೆ ಗೌರಿ ಗಿಡದ ಒಂದು ಫೋಟೊ ಪ್ಲೀಸ್.....
      ಪ್ರೀತಿಯಿಂದ - ಶ್ರೀಮತಿ ರೇಖಾ ಕೆ. ಹೆಬ್ಬಾರ್, ಕರ್ಕಿ

      Delete
    3. ಧನ್ಯವಾದಗಳು ನಿಮ್ಮ ಹಾರೈಕೆಗೆ :). ಗೌರಿ ಹೂವಿನ ಕಾಲವಿನ್ನೂ ಶುರುವಾಗಿಲ್ಲ. ಹೂವು ಆದಗ ಫೊಟೊ ಹಾಕುತ್ತೆನೆ

      Delete
  2. ಚೆನ್ನಾದ ವಿವರಣೆ. ಅದ್ಭುತ ಅವಲೋಕನ

    ReplyDelete
  3. ನಿನಗೆ ಅಪ್ಪ ಸರಿಯಾದ ಹೆಸರನ್ನೇ ಇಟ್ಟಿದ್ದಾರೆ...ಭೂಮಿ ತಾಯಿಯ ಉಸಿರೆ ವನ್ಯ ಸಂಪತ್ತು.....ನಿನಗೆ ಪರಿಸರ ಪ್ರಜ್ಞೆ ಮತ್ತು ಪರಿಸರ ಕಾಳಜಿ ಒಂದು ಅದ್ಭುತ ಶಕ್ತಿಯಾಗಲಿದೆ.ತುಂಬಾ ಗಂಭೀರ ಲೇಖನ...ಗಾಯಾ ಸಿದ್ದಾಂತ ನಂಗೆ ಗೊತ್ತಿರಲಿಲ್ಲ..

    ReplyDelete
  4. ಎಲೆ ಮರೆಯ ಕಾಯಿಯಂತೆ ನಿಮ್ಮ ತಂದೆಯವರು ಪರಿಸರ ಸಂರಕ್ಷಣೆಗಾಗಿ ಬಹಳ ಕೆಲಸ ಮಾಡಿದ್ದಾರೆ. ಅದರ ಪ್ರತಿಫಲವನ್ನು ನೋಡುತ್ತಿದ್ದೇವೆ, ನಿಮ್ಮ ಲೇಖನದ ಮೂಲಕ. ತಂದೆಗೆ ತಕ್ಕ ಮಗಳು. ಲೇಖನ ತುಂಬಾ ಚೆನ್ನಾಗಿದೆ. ನಿಮಗೆ ಉಜ್ವಲ ಭವಿಷ್ಯವಿದೆ. ಹೀಗೆ ಮುಂದುವರಿಸಿ....

    ReplyDelete
  5. ಎಲೆ ಮರೆಯ ಕಾಯಿಯಂತೆ ನಿಮ್ಮ ತಂದೆಯವರು ಪರಿಸರ ಸಂರಕ್ಷಣೆಗಾಗಿ ಬಹಳ ಕೆಲಸ ಮಾಡಿದ್ದಾರೆ. ಅದರ ಪ್ರತಿಫಲವನ್ನು ನೋಡುತ್ತಿದ್ದೇವೆ, ನಿಮ್ಮ ಲೇಖನದ ಮೂಲಕ. ತಂದೆಗೆ ತಕ್ಕ ಮಗಳು. ಲೇಖನ ತುಂಬಾ ಚೆನ್ನಾಗಿದೆ. ನಿಮಗೆ ಉಜ್ವಲ ಭವಿಷ್ಯವಿದೆ. ಹೀಗೆ ಮುಂದುವರಿಸಿ....

    ReplyDelete
  6. ಅದ್ಭುತ ವನ್ಯ... ಗಾಯಾ ಸಿದ್ದಂತವನ್ನ ಸರಳಿಕರಿಸಿದ ರೀತಿ ಬಹಳ ಇಷ್ಟವಾಯಿತು. ಬರವಣಿಗೆ ಶೈಲಿ ತುಂಬಾನೇ ಚೆನ್ನಾಗಿದೆ. ಇನ್ನಷ್ಟು ಮತ್ತಷ್ಟು ಬರಹಗಳು ನಿನ್ನಿಂದ ಬರಲಿ

    ReplyDelete
    Replies
    1. ಧನ್ಯವಾದಗಳು ಗಣೇಶಣ್ಣ

      Delete
  7. This comment has been removed by the author.

    ReplyDelete
  8. ಮೆದುಳಿಗೆ ಮೇವಾಗಬಲ್ಲಂತಹ ಲೇಖನ.. ಉತ್ತಮ ನಿರೂಪಣೆ. ಒಳ್ಳೆಯ ವಿಷಯ ಸಂಗ್ರಹಣೆ... ಮತ್ತು ಗೇಯ ಸಿದ್ದಾಂತ ದಂತಹ ವಿಶೇಷ ವಿಷಯ.. ಓದಿ ತುಂಬಾ ಖುಷಿ ಆಯ್ತು... ಹೀಗೆ ಸಾಗಲಿ ನಿನ್ನ ಹುಡುಕಾಟ ..
    ಧನ್ಯವಾದ ವನ್ಯ ಉತ್ತಮ ಲೇಖನಕ್ಕೆ
    - ಗುರು ಹೂಡ್ಲಮನೆ

    ReplyDelete
  9. ಅಪ್ಪನಿಗೆ ತಕ್ಕ ಮಗಳಾಗುವ ಎಲ್ಲ ಲಕ್ಷಣಗಳು ನಿಮ್ಮಲ್ಲಿದೆ..
    ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯುವುದೂ ಸವಾಲೇ ಸೈ..ಈ ಕಲೆ ನಿಮಗೊಲಿದಿದೆ...ಮುಂದುವರೆಸಿ..
    ಖುಷಿಯಾಯಿತು..

    ReplyDelete
  10. Nice post Vanya

    ReplyDelete

Post a Comment

You may like these too...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ