Skip to main content

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.
 
   ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು!
ಅಂತೂ ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಂಸ್ಯೆ ಬಂತು. ಜರ್ಮನಿಯಲ್ಲಿ ಹಿಮ ಬೀಳುತ್ತದೆ ಎಂದು ಅಪ್ಪ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು, ಅಲ್ಲಿ ೨೪/೭ ಹಿಮ ಬೀಳುತ್ತಲೆ ಇರುತ್ತದೆ ಎಂದುಕೊಂಡು ಹಿಮವೆಲ್ಲಿ ಎಂದು ಪ್ರಶ್ನಿಸಿದ್ದೆ. ನನ್ನ ಪ್ರಕಾರ ಆಗ ಹಿಮ ಬೀಳುವ ಜಾಗ ಎಂದರೆ ಯಾವಾಗಲೂ ಹಿಮ ಬೀಳುತ್ತದೆ ಎಂದು ನಂಬಿದ್ದೆ. ನಾವು ಹೋಗಿದ್ದು ಬೇಸಿಗೆಯಲ್ಲಿ , ಆಗ ಎಲ್ಲಿ ಹಿಮ ಸಿಗಲು ಸಾಧ್ಯ?
           ಕೊನೆಗೆ ನನಗೆ ಹಿಮ ತೋರಿಸಬೇಕೆಂದು ಪಕ್ಕದ ಆಸ್ಟ್ರಿಯಾದಲ್ಲಿ ಹಾದು ಹೋಗುವ ಆಲ್ಪ್ಸ್ ಪರ್ವತ ಶ್ರೇಣಿಗೆ ಹೊರಟೆವು. ಅಲ್ಲಿ ಹೋದಾಗ ನಾನು ಕಥೆಯಲ್ಲಿ ಕೇಳಿದ್ದ ಕೈಲಾಸ ಪರ್ವತವಾ ಇದು? ಎಂದು ಕೇಳಿದ್ದೆ. ಕೇಬಲ್ ಕಾರ್ ನ ಮೇಲೆ ಇನ್ನೊಂದ್ದು ಸಾರಿ ಅದರಲ್ಲಿ ಹೋಗಬೇಕು ಎಂದು ಹಠ ಹಿಡಿದ್ದಿದ್ದು ಎಲ್ಲವೂ ಚೂರು ಚೂರು ನೆನಪಿದೆಯಷ್ಟೆ.                           
     ಗ್ರೈಫ಼್ಸ್ ವಾಲ್ಡಿನಲ್ಲಿನ ನಮ್ಮ ಮನೆಯ ಪಕ್ಕದಲ್ಲಿ ವಾಸವಿದ್ದ  ವಿಯೆಟ್ನಾಮಿ   ಕುಟುಂಬದ ನನ್ನದೇ ವಯಸ್ಸಿನ ಹುಡುಗಿ ಗಾಬಿಯ ಪರಿಚಯವಾಯಿತು. ಅವಳ ನಿಜವಾದ ಹೆಸರು ಗಾಬಿ ಎಂದೇ ಆದರೂ ಇಂಗ್ಲಿಶ್ ನಲ್ಲಿ ಸ್ಪೆಲ್ಲಿಂಗ್ ನೊಡಿದರೆ ಮತ್ತೇನೊ ಇರುತ್ತಿತ್ತು. ಕೊನೆಗೂ ಅವಳ ಸರಿಯಾದ ಹೆಸರು ಏನೆಂದು ತಿಳಿಯಲು ಸಾಧ್ಯವಾಗಲಿಲ್ಲ. ಅವಳೊ ಗ್ರೈಫ಼್ಸ್ ವಾಲ್ಡಿನಲ್ಲೇ ಹುಟ್ಟಿ ಬೆಳೆದವಳು , ಆದರೆ ವಿಯೆಟ್ನಾಮೀಸ್ ಭಾಷೆಯನ್ನು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಅದು ಹೇಗೊ ನಾನು ಕನ್ನಡದಲ್ಲಿಯೂ ಅವಳು ವಿಯೆಟ್ನಾಮೀಸ್ ನಲ್ಲಿಯೂ ಸಂವಹಿಸುತ್ತಿದ್ದೆವು. ಗಾಬಿ ಅಪಾರ್ಟ್ಮೆಂಟ್ ಪಕ್ಕದಲ್ಲಿಯೇ ಇದ್ದ  ಕಿಂಡರ್ ಗಾರ್ಡನ್ ಗೆ ಹೋಗುತ್ತಿದ್ದಳು.ರಾತ್ರಿ ಹತ್ತು ಗಂಟೆಯವರೆಗೂ ಬೆಳಕೇ ಇರುತ್ತಿದ್ದುದ್ದರಿಂದ ನಾನು ಅಮ್ಮನೊಡನೆ ಅಲ್ಲಿಯ ಪಾರ್ಕ್ ಗೆ ರಾತ್ರಿಯ ವೇಳೆಯೂ ಹೋಗಿ ಆಡುತ್ತಿದ್ದೆ.

ನನಗೆ ನೆನಪಿರುವ ಹಾಗೆ ಅಪ್ಪ  ಯುನಿವರ್ಸಿಟಿ ಗೆ ಹೋಗುವಾಗ " ನಾನು ಶಾಲೆಗೆ ಹೋಗುವಾಗ ಅಪ್ಪ ಏಕೆ ಶಾಲೆಗೆ ಹೊಗುತ್ತಾನೆ?"ಎಂದು ಆಶ್ಚರ್ಯ ವಾಗುತ್ತಿತ್ತು. "ಅಪ್ಪ ನೀನು ಯುನಿಫ಼ಾರಮ್ ಎಂತಕ್ಕೆ ಹಾಕ್ಯಂಡು ಹೋಗ್ತಿಲ್ಯಾ ?" ಎಂದು ಕೇಳುತ್ತಿದ್ದೆ. 
              ಸುಪರ್ ಮಾರ್ಕೆಟ್ಗೆ ಹೋದಾಗ ಅಲ್ಲಿ ಚಾಕ್ಲೇಟ್ ಬೇಕು ಎಂದೆನಿಸಿದರೆ ಸ್ವಲ್ಪ ದೊಡ್ಡದಾಗಿ ಮಾತಾಡಿದರೆ ಸಾಕು, ಎಲ್ಲರೂ ಹೆಚ್ಚು ಕಮ್ಮಿ ಪಿಸುಗುಟ್ಟುವಷ್ಟು ಸಣ್ಣ ದ್ವನಿಯಲ್ಲಿ ಮಾತಾಡುವ ಜನರೆಲ್ಲರೂ ಹಿಂದಿರುಗಿ ನೋಡುತ್ತಿದ್ದರು. ಹೀಗಾಗಿ ಅಮ್ಮ ಬೇರೆ ದಾರಿಯಿಲ್ಲದೇ ಸುಮ್ಮನೇ  ಬೇಕಾಗಿದ್ದನ್ನು ಕೊಡಿಸುತ್ತಿದ್ದಳು. ಆಗಾಗ ಅಲ್ಲಿಯೇ ಇದ್ದ ಕನ್ನಡದ ತೇಜಸ್ವಿನಿ ಅಕ್ಕನ ಮನೆಗೆ ಹೋಗುತ್ತಿದ್ದೆವು. ಅಲ್ಲಿಯೇ ಪರಿಚಯವಾದ ಅಪ್ಪನ  ಕ್ಲಾಸ್ ಮೇಟ್ ಗಳಾದ  ಟಾಂಗ್ ಬೋ ಅಕ್ಕ, ಹರಾನ್, ತೈದಾ, ಲಿಯಾಂಡ್ರೋ ಮುಂತಾದವರ ಪರಿಚವೂ ಆಯಿತು. ಅವರಲ್ಲಿ ನನಗೆ ಅತ್ಯಂತ ಹತ್ತಿರವಾದದ್ದು ಬೋ ಅಕ್ಕ. ಎಷ್ಟರ ಮಟ್ಟಿಗೆ ನಾವಿಬ್ಬರು ಹತ್ತಿರವಾಗಿದ್ದೆವು ಎಂದರೆ ಅವಳು ನಾವು ಮತ್ತೆ ಭಾರತಕ್ಕೆ ಹೊರಡುವಾಗ ಬಹಳ ಅತ್ತಿದ್ದಳು. 
       ಇವೆಲ್ಲರ ನಡುವೆ ಬಿಡುವಿದ್ದಾಗ ಹೋಗಿದ್ದ ರೂಗೆನ್ ಐಲ್ಯಾಂಡ್, Stralsund ನ ನ್ಯಾಚುರಲ್ ಮ್ಯುಸಿಯಮ್, ಚಿಟ್ಟೆ ಪಾರ್ಕ್, ಅಮ್ಮನ ಗೆಳತಿ ಸಂಧ್ಯಾ ಅತ್ತೆ ವಾಸವಿದ್ದ ಬರ್ಲಿನ್ ನಲ್ಲಿನ Cruise Ship ನಲ್ಲಿ ಹೋಗಿ ನನ್ನ ಹಡಗನ್ನು ನೋಡುವ ಆಸೆಯೂ ಪೂರ್ಣವಾಗಿತ್ತು. 
    ಕೊನೆಗೆ ಭಾರತಕ್ಕೆ ಬಂದಿಳಿದಾಗ ಬೆಂಗಳೂರಿನಲ್ಲಿ ಮೊದಲು ಕೇಳಿದ್ದು ಇಡ್ಲಿ ವಡೆ. ಅಮ್ಮನಂತೂ "ಇನ್ನು ನೀನು ಎಷ್ಟು ಬೇಕಾದರೂ ಕೂಗು, ಜರ್ಮನಿಯ ಹಾಗೆ ಇಲ್ಲಿ ನಿನಗೆ ಬೇಕಾಗಿದ್ದೆಲ್ಲ ಸಿಗ್ತಿಲೆ" ಎಂದು ಹೇಳಿಬಿಟ್ಟಿದ್ದಳು.
ಕೊನೆಗೆ ಸ್ಲೀಪಿಂಗ್ ಕೋಚ್ ಬಸ್ ಬೇಡ , ಸಾದ ಕೆಂಪು ಬಸ್ಸೇ ಬೇಕು ಎಂದು ಹಠ ಹಿಡಿಯುವುದರೊಂದಿಗೆ ನನ್ನ ಜರ್ಮನಿ ಪ್ರವಾಸ ಮುಗಿದಿತ್ತು.
 

Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ