Skip to main content

ಮರಗಳ ಮಾತನು ಕೇಳಿದಿರಾ?

 

ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ. ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತಾರು ವರ್ಷಗಳು ಮತ್ತೆ ಕಳೆಯುತ್ತದೆ. ಮರ ಈಗ ಒಂದು ಚಿಕ್ಕ ತುಂಡು ಅಷ್ಟೇ . ಒಂದು ದಿನ ಅವನು ಬರುತ್ತಾನೆ. ಅವನೇಗ ಮುದುಕ. ಮರ ಮತ್ತೆ ಎಂದಿನಂತೆ ಪ್ರೀತಿಯಿಂದ ಅವನನ್ನು ಕರೆಯುತ್ತದೆ. ಅವನು ಮರವನ್ನು ಕೇಳುತ್ತಾನೆ.’’ ಮರವೇ, ನನಗೆ ಸುಸ್ತಾಗಿದೆ. ನಿನ್ನ ಮೇಲೆ ನಾನು ಕುಳಿತುಕೊಳ್ಳಲೆ?’’ ಎಂದು ಕೇಳುತ್ತಾನೆ. ಮರ ‘’ಸರಿ. ಕುಳಿತುಕೋ.."ಎಂದು ಮರ ಉತ್ತರಿಸುತ್ತದೆ.


ಇದು  ‘The Giving Tree’ ಎಂಬ ಸುಂದರ ಕಥೆಯ ಅನುವಾದ. ನಾವೆಲ್ಲರೂ ಮೊದಲಿನಿಂದಲೂ ಕೇಳಿರುವ ಕಥೆ. ಮರದ ತ್ಯಾಗ ಮನೋಭಾವವನ್ನು ತೋರಿಸುವ ಕಥೆ ಇದಾದರೂ  ಮರವೂ ಮಾತನಾಡುವಂತಿದ್ದರೆ ಎಂಬ ಕಲ್ಪನೆ ನಮ್ಮೆಲರಲ್ಲಿ ಹುಟ್ಟುಹಾಕಿದ್ದಂತೂ ನಿಜ. ಮರಗಳೂ ಸಹ ನಾವು ಮಾತನಾಡುವಂತೆ ಅವರದ್ದೇ ಭಾಷೆಯಲ್ಲಿ ಮಾತನಾಡಿಕೊಳ್ಳಬಲ್ಲವೇ? ಮರಗಳೂ ಆಹಾರವನ್ನು ಹಂಚಿಕೊಳ್ಳುತ್ತವೆಯೇ? ಮರಗಳೂ ಜಗಳವಾಡುತ್ತವೆಯೇ? 

ಹೌದು ಎನ್ನುತ್ತಾರೆ ಸಂಶೋಧಕರು! ಮರಗಳೂ ಮಾತನಾಡುತ್ತವೆಯಂತೆ. ಇದನ್ನು ಮೊತ್ತಮೊದಲು ಪ್ರತಿಪಾದಿಸಿದವರು ಸುಜೇನ್ ಸೀಮರ್ಡ್ ( Suzzane Simard). ಈ ತತ್ವದ ಪ್ರಕಾರ ಮರಗಳೂ ಜಗಳವಾಡುತ್ತವೆ, ಮಾತನಾಡುತ್ತವೆ, ಆಹಾರವನ್ನು ಹಂಚಿಕೊಳ್ಳುತ್ತವೆ, ಮನುಷ್ಯರಲ್ಲಿ ಕಳ್ಳರಿರುವಂತೆ ಇವರಲ್ಲೂ ಕೆಲ  ground orchid ಗಳಂತಹ ಪೋಷಕಾಂಶ  ಕಳ್ಳರೂ ಇರುತ್ತಾರೆ! ಇದಕ್ಕೆ Wood Wide Web ಎಂದು ಸಾಮಾನ್ಯವಾಗಿ ಕರೆಯುತ್ತಾರೆ.

by vanya 

ಅಷ್ಟಕ್ಕೂ ಹೇಗೆ ಈ ಜಾಲ ನಡೆಯುತ್ತದೆ?: ಇದು ನಮ್ಮ ಫೋನ್ ನೆಟ್ವರ್ಕ್ ಜಾಲಗಳಿರುವಂತೆಯೇ ಒಂದು ಮರದಿಂದ ಇನ್ನೊಂದು ಮರ, ಅದರಿನ ಮತ್ತೆರಡು ಮರಗಳು.. ಹೀಗೆ ಕೂಡುತ್ತಾ ಹೋಗುತ್ತದೆ. ಯೋಚಿಸಿ ಎಷ್ಟು ಮರಗಳಾಗಬಹುದು ಎಂದು! ತಾಯಿ ಮರ ಅಥವಾ ಕಾಡಿನಲ್ಲಿರುವ ಅತಿ ಹಳೆಯ, ದೊಡ್ಡ ಮರದಲ್ಲಿ ಪೋಷಕಾಂಶಗಳು ಮತ್ತು ಗ್ಲುಕೊಸ್  ಅಂಶ ಹೆಚ್ಚು ಉಳಿದಾಗ ಅದು ಪೋಷಕಾಂಶದ ಅಗತ್ಯ ಹೆಚ್ಚಿರುವ ಅದಕ್ಕಿಂತ ಚಿಕ್ಕ ಮರಕ್ಕೆ ಕಳಿಸಲು ಪ್ರಯತ್ನಿಸುತ್ತದೆ.ಒಂದು ತಾಯಿ ಮರ ಸುಮಾರು 40 ಕ್ಕೂ ಹೆಚ್ಚು ಮರವನ್ನು ತಲುಪಬಹುದಂತೆ. ಆಗ ಮರಗಳ ಬೇರಿನ ತುದಿಯಲ್ಲಿ ಬೆಳೆಯುವ Mycelium ಎಂಬ ಶಿಲೀಂದ್ರವು ಪೋಷಕಾಂಶಗಳನ್ನು ತನ್ನ ಮೂಲಕ ಮತ್ತೊಂದು ಮರಕ್ಕೆ ಕಳಿಸಿಕೊಟ್ಟು , ಉಳಿದ ಗ್ಲುಕೊಸ್ ಅಂಶವನ್ನು  ತನಗೆ ಇಟ್ಟುಕೊಳ್ಳುತ್ತದೆ. ಮನುಷ್ಯರು ತಮಗೆ ಹೆಚ್ಚಾದ ಆಹಾರವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ಹಾಗೆ! ಇಲ್ಲಿ ನಮ್ಮ ಭಾಷೆಯಲ್ಲಿ ಹೇಳುವುದಾದರೆ ಶಿಲೀಂದ್ರಗಳಿಗೆ ಗ್ಲುಕೊಸ್ ಸಂಬಳವಿದ್ದಂತೆ!

ಇದಕ್ಕೆ Mycorrizal network ಎಂಬ ವೈಜ್ನಾನಿಕ ಹೆಸರೂ ಇದೆ. ಇವು ಬರೀ ಆಹಾರ ಹಂಚಿಕೊಳ್ಳುವುದಷ್ಟೇ ಅಲ್ಲ, ಮೊದಲೇ ಉಲ್ಲೇಖಿಸಿದ ಹಾಗೆ ಇಲ್ಲಿ ಕಳ್ಳ ಗ್ರೌಂಡ್  ಆರ್ಕಿಡ್ ಗಳಿಗೇನೂ ಕೊರತೆಯಿಲ್ಲ.ಇವು ಒಂದು ರೀತಿಯಲ್ಲಿ ನಮ್ಮ ಇಂಟರ್ನೆಟ್ ಹ್ಯಾಕರ್ ಗಳಂತೆಯೇ. ಆಹಾರವನ್ನು ಕಳಿಸುವಾಗ ಮಾರ್ಗ ಮಧ್ಯದಲ್ಲಿ ಇವು ತಮ್ಮ ಬೇರುಗಳನ್ನು ಇಳಿಸಿ ಅಲ್ಲಿನದ ಆಹಾರ ಕದಿಯುತ್ತವೆ. ಇವುಗಳ ಹಾಗೆಯೇ ಇನ್ನೂ ಕೆಲ ಗಿಡಗಳು ಒಂದೆರಡು ಹೆಜ್ಜೆ ಮುಂದೆ ಹೋಗಿ ತಮಗೆ ಬೆಳೆಯಲು ಇನ್ನೂ ಜಾಗವಾಗುವಂತೆ ಮಾಡಲು ತಮ್ಮ ಬೇರಿನ ಮೂಲಕ ವಿಷಕಾರಿ ರಾಸಾಯನಿಕಗಳನ್ನು ಪಕ್ಕದ ಮರಕ್ಕೆ ರವಾನಿಸಿ ಆ ಮರವನ್ನೇ ಕೊಲ್ಲುತ್ತದೆ! ಇದು ನಮ್ಮ ದಾರಾವಾಹಿಗಳಲ್ಲಿ ವಿಲನ್ ಗಳು ಆಹಾರದಲ್ಲಿ ವಿಷ ಬೇರೆಸುತ್ತಾರಲ್ಲಾ ಹಾಗೆಯೇ ಅಲ್ಲವೇ?ಅಲ್ಲಿ ಎಂತಹ ವಿಷ ಕೊಟ್ಟರೂ ಕಥೆಯ ಪ್ರಮುಖ ಪಾತ್ರಧಾರಿಗಳೂ ಸಾಯುವುದಿಲ್ಲ ಎಂಬುದು ಬೇರೆ ವಿಷಯ ಬಿಡಿ,ಇಲ್ಲಿ ಹಾಗಲ್ಲ .ಇಂತಹ ಸಸ್ಯಗಳಲ್ಲಿ ಒಂದು black walnut. ಇದು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ತನ್ನ ಅಕ್ಕಪಕ್ಕದ ಗಿಡಗಳನ್ನು ವಿಷಯ ಕೊಟ್ಟು ಸಾಯಿಸಿ ನಂತರ ತಾನು ವಿಶಾಲವಾಗಿ ಬೆಳೆದುಕೊಳ್ಳುತ್ತದೆ.

  ಕೊಲ್ಲುವ ಸಸ್ಯಗಳು ಒಂದು ಕಡೆಯಾದರೆ, ಕಾಯುವ ಸಸ್ಯಗಳು ಇನ್ನೊಂದು ಕಡೆ. ತಾಯಿ ಮರಗಳು ಈ fungal network ಅಥವಾ ಶಿಲೀಂದ್ರ ಸಂಪರ್ಕವನ್ನು ತನ್ನ ಬೀಜ ಪ್ರಸರಣಕ್ಕೂ ಬಳಸಿಕೊಳ್ಳುತ್ತದೆಯಂತೆ. ಇನ್ನು  ಸಾಯುತ್ತಿರುವ ಅಥವಾ ರೋಗಗ್ರಸ್ಥ ಮರಗಳು ತಮ್ಮ ಸುತ್ತಲಿನ ಮರಗಳು ಅಥವಾ ಅಗತ್ಯವಿರುವ ಮರಗಳಿಗೆ ತನ್ನಲ್ಲಿ ಉಳಿದಿರುವ ಪೋಷಕಾಂಶಗಳನ್ನು ದಾನವನ್ನೂ ಮಾಡುತ್ತದೆ, ನಾವು ಮನುಷ್ಯರು ರಕ್ತದಾನ ಮಾಡುವ ಹಾಗೆ! ಕೆಲವು ಸಸ್ಯಗಳು ತಮಗೆ ರೋಗ ಬಂದರೆ ಅಥವಾ ಕೀಟಗಳು ಧಾಳಿ ಮಾಡಿದರೆ ಅಕ್ಕಪಕ್ಕದ ಸಸ್ಯಗಳಿಗೂ ರಾಸಾಯನಿಕ ಸಂದೇಶ ಕಳಿಸುತ್ತವೆ. ನಾವು ಒಂದು ಊರಿಗೆ ಪ್ರವಾಹ ಬಂದರೆ ಪಕ್ಕದ ಊರಿಗೂ ರೆಡ್ ಅಲರ್ಟ್ ಘೋಷಿಸುವ ಹಾಗೆ! ಮನುಷಯರಿಗೂ ಮರಗಳಿಗೂ ಎಷ್ಟೊಂದು ಸಾಮ್ಯತೆ ಇದೆ ಅಲ್ಲವೇ? ಇದು ಗಾಯಾ ಥಿಯರೀಗೆ ಒಂದು ಒಳ್ಳೆಯ ಉದಾಹರಣೆ.ಇನ್ನು ನಾವು ‘’ಅದೇನು ಮರದ ಹಾಗೆ ಸುಮ್ಮನೆ ನಿಂತಿದ್ದಿಯಾ’’ , ''ಮರದ ಕೊರಡಿನ ಹಾಗೆ ನಿಲ್ಲಬೇಡ'' ಎಂದೆಲ್ಲಾ ಬಯ್ಯುವ ಹಾಗಿಲ್ಲ. ಏಕೆಂದರೆ ಮರಗಳೂ ಮಾತನಾಡುತ್ತವೆ, ಮರಗಳೂ ಮನುಷ್ಯರ ಹಾಗೆಯೇ ಸಂಪರ್ಕ ವ್ಯವಸ್ಥೆ ಹೊಂದಿವೆ. ನಮಗಿಂತ ಸಾವಿರಾರು ವರ್ಷಗಳ ಮೊದಲೇ! ನಾವಾದರೋ ಇವೆಲ್ಲವನೂ ಈಚೆಗೆ ಕಂದುಕೊಂಡಿದ್ದು, ಆ ಮರಗಳಿಗೆ ಕಲಿಸಿದವರಾರು?


ಈಗ ಇಂತಹ ಕ್ಲಿಷ್ಟಕರವಾದ ಜಾಲದಲ್ಲಿ ಮುಖ್ಯವಾದ ತಾಯಿಮರವನ್ನೇ ಕಡಿದು ಹಾಕಿದರೆ ಅಥವಾ ಈ ಮರಗಳ ಜಾಲದಲ್ಲಿ ಒಂದಿಷ್ಟು ಮರಗಳನ್ನು ಸಾಯಿಸಿದರೆ ಅದೆಷ್ಟು ನಷ್ಟವಾಗಬಹುದು? ಕೇವಲ ಒಂದು ತಾಯಿ ಮರ ಹೋದರೂ ಸಹ ಶೇಕಡಾ 47% ನಷ್ಟವಾಗುತ್ತದೆಯಂತೆ. ಇನ್ನು ನೆಡುತೋಪುಗಳು ಅಥವಾ ಇನ್ಯಾವುದೋ ಉದ್ದೇಶಕ್ಕಾಗಿ ನಾವು ಮರಗಳನ್ನು ಕಡಿಯುತ್ತಾ ಹೋದರೆ, ಅದೆಷ್ಟು ನಷ್ಟವಾಗಬಹುದು ಯೋಚಿಸಿ. ಮರಗಳ ಜಾಲದ ಜೊತೆ ಅದರ ಜೊತೆಯೆ ಮರಗಳನ್ನು ಆಶ್ರಯಿಸಿರುವ  ಜೀವ ಜಾಲವೂ ನಾಶವಾಗುತ್ತದೆ. ಆ ಜೀವ ಜಾಲ ನಾಶವಾದರೆ ಆ ಜಾಲದೊಂದಿಗೆ ಇರುವ ಮತ್ತೊಂದಿಷ್ಟೂ ಸಂಕುಲಗಳು ನಾಶವಾಗುತ್ತವೆ.ಈ ಜಾಲದ ಕೊನೆಯಲ್ಲಿರುವ ನಾವು ಮನುಷ್ಯರೂ ಸಹ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ, ಈಗಾಗಲೇ ಅದರ ಪರಿಣಾಮ ಗೊತ್ತಾಗುತ್ತಿದೆ ಕೂಡ.

ಇನ್ನು ಮುಂದೆ ಕಾಡಿಗೆ ಹೋದಾಗ ಮರಗಳನ್ನು ಮಾತ್ರ ನೋಡಬೇಡಿ, ಜೊತೆಗೆ ನಿಮ್ಮ ಕಾಲ ಕೆಳಗೆ ನಡೆಯುತ್ತಿರುವ ಮರಗಳ ಮಾತನ್ನು ಕಲ್ಪಿಸಿ ನೋಡಿ...ಮರಗಳ ಮಾತನು ಕೇಳಿ ನೋಡಿ...


Please fill this Blog Survey







Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರ...

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ...