ಮೊನ್ನೆ ಯಾರೋ ಮನೆಗೆ ಬಂದಾಗ ಹೇಳುತಿದ್ದ ಮಾತುಗಳಿವು. ಹೌದು, ಅದಾಗಲೇ ಮಳೆಗಾಲ ಅನ್ ಅಫೀಷಿಯಲ್ ಆಗಿ ಶುರುವಾಗಿ ಬಿಟ್ಟಿದೆ. ಇದು ಅಸಹಜವೆ ಆದರೂ, ನಮ್ಮಲ್ಲಿ ಮಳೆಗಾಲದ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆಯುತ್ತಿದ್ದಾಗಲೇ ಮಳೆ ಶುರುವಾಗಿದೆ.
ಮಳೆ ಜಿರಲೆ( cicada ) ಗಳ ಸದ್ದು ಸಂಜೆಯಾಗುತ್ತಿದ್ದಂತೆ ಶುರುವಾದರೆ, ಮಳೆಗಾಲ ಶುರುವಾತು ಎಂದರ್ಥ. ಮೊದಲ ಮಳೆಯಲ್ಲಿ ನೆಲ ತೊಯ್ದಾಗ ಬರುವ ಮಣ್ಣಿನ ಸುಗಂಧ (ಇದನ್ನು petrichor ಎನ್ನುತ್ತಾರಂತೆ ).. ಎಲ್ಲವೂ ಚೆನ್ನ.
ಶಾಲೆಗಳು ಈಗ ತೆರೆದಿದ್ದರೆ, ಇಷ್ಟು ಹೊತ್ತಿಗೆ ಹೊಸ ಬ್ಯಾಗ್ , ಪುಸ್ತಕ ಎಂದೆಲ್ಲಾ ಪೇಟೆಗೆ ಓಡಾಟ ಶುರುವಾಗುತ್ತಿತ್ತು. ಜೊತೆಗೆ ರಜೆಯಲ್ಲಿ ಕೊಟ್ಟಿದ್ದ ಹೋಂವರ್ಕ್ ಮುಗಿಸುವ ಕೆಲಸವೂ ಶುರುವಾಗಿರುತಿತ್ತೇನೋ. ಆದರೆ ಈ ಬಾರಿ ಅದೇನೂ ಇಲ್ಲವಲ್ಲಾ.
ಮಳೆಗಾಲ ಎಂದರೆ ಕಾಡು ಹೂಗಳ ಸಮಯ. ಈಗ ಸೀತಾಳೆ (orchid ) ಅಥವಾ ಸೀತೆ ದಂಡೆ ಹೂವು ಅರಳುವ ಸಮಯ. ರಾಮಾಯಣದ ಸೀತೆ ವನವಾಸದಲ್ಲಿದ್ದಾಗ ಈ ಹೂವನ್ನು ಮುಡಿದು ಹಾಲು ಕಾಯಿಸಿದ್ದಳು ಎಂದೂ, ಅದಕ್ಕಾಗಿ ಈ ಹೂವಿಗೆ ಹಾಲಿನ ಪರಿಮಳ ಇದೆಯೆಂದು ಕತೆಯಿದೆ. ಶಾಲೆಯಲ್ಲಿ ಯಾವ ತರಗತಿಯ ಬಾಗಿಲಿಗೆ ಹೆಚ್ಚು ಸೀತೆ ದಂಡೆ ಇರುತ್ತದೆ ಎಂದು ನೋಡುವುದೇ ಖುಷಿ.
ಕಳೆದ ವರ್ಷ ಮಳೆಗಾಲದಲ್ಲಿ ಕಾಡಿಗೆ ಹೋದಾಗ, ಒಂದು ಹೊಸ ರೀತಿಯ orchid ಕಂಡಿತ್ತು. ಅದನ್ನು ತಂದು ಮರದ ಮೇಲೆ ಹಾಕಿಟ್ಟಿದ್ದೆ. ಈ ವರ್ಷ ಅಂತೂ ಹೂ ಬಿಟ್ಟಿದೆ. ಇದರ ಹೆಸರೇನು ಎಂದೇನೂ ತಿಳಿದಿಲ್ಲ. ಗೂಗಲ್ ಮೊರೆ ಹೋದಾಗಲೂ ಯಾವುದು ಇದು ಎಂದು ತಿಳಿಯಲಿಲ್ಲ. ಬದಲಾಗಿ ನೂರಾರು ಚಿತ್ರಗಳನ್ನು ತೋರಿಸಿ ಕನ್ಫ್ಯೂಸ್ ಮಾಡಿಬಿಟ್ಟಿತು. ನಿಮಗೆ ಗೊತ್ತಿದ್ದರೆ ತಿಳಿಸಬಹುದು.ಅಂದ ಹಾಗೆ ಈ ಸಮಯದಲ್ಲಿ ಹಣ್ಣುಗಳಿಗೇನೂ ಕೊರತೆಯಿಲ್ಲ. ಬಿಕ್ಕೆ ಹಣ್ಣು ಈ ಸಮಯದ ಸೆಲಿಬ್ರಿಟೀ ಹಣ್ಣು. ಜೊತೆಗೆ ಹುಳಿ ಸಿಹಿ ರುಚಿಯ ಸಳ್ಳೆ ಹಣ್ಣು , ಸಂಪಿಗೆ ಹಣ್ಣು ಎಲ್ಲವೂ ಸಿಗುತ್ತದೆ. ಈಗ ಬರೀ ಆರ್ಕಿಡ್ ಗಳ ಕಾಲವಲ್ಲ, ಇಲ್ಲಿ ಡೇರೆ (Daliya) ಹೂಗಳ ಮೇಳವೂ ನಡೆಯುತ್ತಿರುತ್ತದೆ. ಎಲ್ಲೆಯರ ಮನೆಯ ಮುಂದೆಯೂ ಹತ್ತಾರು ಬಣ್ಣಗಳ ಹೂವುಗಳ ಸಂತೆಯೇ ನೆರೆದಿರುತ್ತದೆ. ಪಟ್ಟಣಗಳಲ್ಲಿ ಹೂಗಳ ಮೇಳವೂ ನಡೆಯುತ್ತದೆ. ಮಳೆಗಾಲ ಬಂದರೆ ಭೂಮಿಗೆ ಜೀವ ಬಂದ ಹಾಗೆ ಅನಿಸುತ್ತದೆ. ರಾತ್ರಿಯಲ್ಲಿ ಮಳೆ ಜೀರಲೆಗಳ ಸಂಗೀತ, ಹಗಲಲ್ಲಿ ಕಪ್ಪೆಗಳ ಹಾಡು. ಇದೊಂದು ರೀತಿಯ 24/7 ಸಂಗೀತ ಕಛೇರಿಯೆ ಸರಿ!
ನಾವು ಮಳೆಗಾಲವನ್ನೂ ಹಬ್ಬದಂತೆ ಆಚರಿಸುತ್ತೇವೆ. ಇದು ಮಲೆನಾಡಿನವರ ಪಾಲಿಗೆ ನಿಜವಾದ ಹಬ್ಬ. ಎಲ್ಲಿ ನೋಡಿದರೂ ಜನ ಕೃಷಿ ಕೆಲಸ ಮಾಡುತ್ತಲೋ, ಅಥವಾ ಹಿತ್ತಲು ನೋಡಿಕೊಳ್ಳುತ್ತಲೋ, ಯಾವ ಕೆಲಸವೂ ಇಲ್ಲದಿದ್ದರೆ, ಬೆಂಕಿಯ ಮುಂದೆ ಕುಳಿತು, ಗೇರುಬೀಜ, ಹಪ್ಪಳ, ಹಲಸಿನ ಬೀಜ ಸುಟ್ಟು ತಿನ್ನುತ್ತಲಾದರೂ ಇರುತ್ತಾರೆ. ಮಳೆಗಾಲದ ಶುರು ಎಂದರೆ ಎಂತದೋ ಖುಷಿ. ಈಗ ಬಂದಿರುವ ಮಳೆ ತೌಕ್ತೆ ಚಂಡಮಾರುತದ ಪ್ರಭಾವ ವಾದರೂ, ಮಳೆ ಮಳೆಯೇ ತಾನೇ. ತೌಕ್ತೆ ಎಂದರೆ ಮಯನ್ಮಾರ್ ನ ಒಂದು ಸುಂದರ ಓತಿಕ್ಯಾತ ದ ಹೆಸರಂತೆ.
The monsoon season is just so soothing and beautiful! It has started to rain where I live, and all the plants look lush and green! The other awesome part about monsoon is staying cozy and eating hot food😝. I love the pics that you've added :)
ReplyDeleteGreat post <3
Yup.Eating hot food is the best part, I agree. Thanks for reading Maith
Delete