ಪುರಾತನ ನಾಗರೀಕತೆಗಳಲ್ಲಿ ಬೆಕ್ಕನ್ನು ದೇವರೆಂದು ಪೂಜಿಸುತ್ತಿದ್ದರಂತೆ. ಈಗ ನೋಡಿದರೆ ನಮ್ಮ ಬೆಕ್ಕುಗಳು ಅದನ್ನಿನ್ನು ಮರೆತಿಲ್ಲವೆಂದು ಕಾಣುತ್ತದೆ.
ಈ ಮಾರ್ಜಾಲಗಳು ತಾವೆ ಮನುಷ್ಯರನ್ನು ಆಳುವವರು ಎಂದು ತಿಳಿದಿರುವಂತಿದೆ. ಅಷ್ಟಕ್ಕೂ ಆಗಿದ್ದೇನು ಎಂದರೆ ನಮ್ಮ ಮನೆಯ ಬೆಕ್ಕು ಮತ್ತು ನನ್ನ ಅಮ್ಮನ ಕಾಳಗ. ಈ ಕಾಳಗವು ಸರ್ವವ್ಯಾಪಿಯೇ ಎಂದೇನೂ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿಬಿಡಿ.
ನಾವು ಬೆಕ್ಕನ್ನು ತಂದಿದ್ದೇ ಇಲಿ ಹಿಡಿಯಲು ಬರಬಹುದು ಎಂಬ ಏಕೈಕ ನೆಪ ಕೊಟ್ಟು.ತಂದ ಮೊದಲ ಬೆಕ್ಕು ಒಂಥರಾ ರಾಯಲ್ ಕ್ಯಾಟ್ ಹಾಗೆಯೇ ಇತ್ತು. ಇಲಿ ಹೆಗ್ಗಣಗಳ ಮೇಲೆ ಸಂಪೂರ್ಣ ಹಿಡಿತ ಇದ್ದಿದ್ದರೂ ಅಮ್ಮ ಮಾತ್ರ "ಊರು ತಿರುಗ್ತು " ಎಂದು ಬೈದುಕೊಂಡಿದ್ದಳು. ತರುವಾಗ ಮುದ್ದಾಗಿ ಇದೆ ಎಂದು ಆರ್ಕಿಡ್(ಸೀತಾಳೆ ಹೂವು) ಎಂದು ಹೆಸರು ಕೊಟ್ಟೆ. ನಂತರ ಗೊತ್ತಯಿತು ಇದು ಪೇಟೆಯ ಆರ್ಕಿಡ್ ಅಲ್ಲ ,ಪಕ್ಕಾ Wild ಆರ್ಕಿಡ್ ಎಂದು. ಮನೆಯ ಬಳಿ
ಬರುವ ಕಳ್ಳ ಬೆಕ್ಕುಗಳ ಜೊತೆಗೆ ಜಗಳ ಕಾಯುವುದು ಇದರ ಅತೀ ಪ್ರಿಯ ಕೆಲಸ. ಜೊತೆಗೆ ನನ್ನ ಫೋಟೊಗಳ ಮಾಡೆಲ್ ಇವಳು. ತರತರವಾಗಿ ಅದನ್ನು ಹಿಡಿದು ಕುಳ್ಳಿರಿಸಿತೊಂದರೆ ಕೊಟ್ಟು ಫೋಟೊ ತೆಗೆಯುತ್ತಿದ್ದೆ. ನಂತರ ನನ್ನ ಕಾಟದಿಂದ ಬೇಸತ್ತು ನಾನು ಬಂದೆ ಎಂದರೆ ಓಡಿಹೋಗುತ್ತಿತ್ತು . ತಮ್ಮ ಅದರ ಮೇಲೆ ಒಂದು ಬುಟ್ಟಿ ಮಗುಚಿಹಾಕಿ ಒಡಲು ಬಿಡುತ್ತಿದ್ದ. ಹೀಗೆ ಒಮ್ಮೆಯಂತು ಮತ್ತೊಂದು ಬೆಕ್ಕು ಕಚ್ಚಲು ಬಂದಾಗ ಇದೇ ಬುಟ್ಟಿ ಅದನ್ನು ಉಳಿಸಿತ್ತು. ಕೆಲಸದ ಮೇಲೆ ಬರುತ್ತಿದ್ದವರು, ಪಿಹೆಚ್‌ಡಿ ವಿದ್ಯಾರ್ಥಿಗಳು ಹೀಗೆ ಎಲ್ಲರ ಕಾಲು ಸುತ್ತುತ್ತಾ ಆರಾಮಾಗಿ ಇತ್ತು.ಆದರೂ ಒಮ್ಮೆ ತೋಟದಲ್ಲಿ ಬೆನ್ನು ಮುರಿದು ನಡೆಯಲಾಗದ ಹಾಗೆ ಆದಾಗ ಅಮ್ಮ ಅದಕ್ಕೆ ದಿನದಿನವೂ ಸೇವೆ ಮಾಡಿದ್ದಳು.ಕಾಲು ಸರಿ ಇದ್ದಾಗ ಊರು ತಿರುಗುತ್ತಿದ್ದ ಬೆಕ್ಕು ಒಮ್ಮೇಲೆ ಡಲ್ ಆಗಿಬಿಟ್ಟಿತ್ತು. ೧.೬ ತಿಂಗಳ ನಂತರ ಆರ್ಕಿಡ್ ತೀರಿದ ಮೇಲೆ ಮತ್ತೊಂದು ಬೆಕ್ಕು ಇಲಿ ಹಿಡಿಯುವ ಕೆಲಸಕ್ಕೆ ಬೇಕು ಎಂಬ ಮತ್ತೊಂದು ನೆಪವೊಡ್ಡಿ ಮತ್ತೆ ತಂದಿದ್ದಾಯಿತು.
ಆಯಿ (ಅಜ್ಜಿ) ಬೆಕ್ಕು ತರುವಾಗ ಕೆಂಪು ಬಣ್ಣದ್ದು ತುಂಬ ಚೆನ್ನಾಗಿರುತ್ತದೆ ಎಂದು ಹೇಳಿದರು. ಹಾಗೆಯೆ ಪೂರ್ತಿ ಕೆಂಪು ಬಣ್ಣದ ಬೆಕ್ಕು ಮನೆಗೆ ಬಂತು.ಈ ಬೆಕ್ಕು ಬಂದಾಗಿನಿಂದ ಬೆಕ್ಕಿಗೂ ಅಮ್ಮಂಗೂ ಭಯಂಕರ ಕಾಳಗ. ಬೆಕ್ಕೋ ,ತಾನೇನು ಕಮ್ಮಿ ಎನ್ನುವಂತೆ ಅಮ್ಮ ಎದುರಿಗೆ ಕಂಡರೆ ಬುಸುಗುಟ್ಟು ಹಡಬೆ ಬೆಕ್ಕು ಎಂಬ ಬಿರುದು ಸಂಪಾದಿಸಿಕೊಂಡಿದೆ." ಅಲ್ಲ.. ಇಲಿ ಹಿಡಿಯಲು ತಂದ ಬೆಕ್ಕು ಹಾವು -ಹಲ್ಲಿ ಹಿಡಿಯಲು ಕುಳಿತರೆ ಎನು ಚಂದ" ಎನ್ನುವುದು ಅಮ್ಮನ ವಾದ. ಬೆಕ್ಕಿನ ಪರ ವಹಿಸಿ ಮಾತಾಡುವುದು ನನ್ನ ಕೆಲಸ. ಇದರ ಕಾರಣದಿಂದಲೇ ಹಲವು ಸಾರಿ ಬೈಸಿಕೊಂಡು "ಹಾಳು ಬೆಕ್ಕು" ಎಂದು ಬೈದುಕೊಂಡಿದ್ದೇನೆ. ಅಪ್ಪನ ಫ಼ಿಶ್ ಟ್ಯಾಂಕ್ನ ಮೀನುಗಳ ಮೇಲೆ ಸಾಮಾನ್ಯವಾಗಿ ಎಲ್ಲ ಬೆಕ್ಕುಗಳಿಗಿರುವಂತೆ ಆಸೆ ಈ ಬೆಕ್ಕಿಗೂ ಇತ್ತು. ಆದರೆ ಮೀನಿನ ಪುಣ್ಯ ಎನ್ನಬೇಕೊ ಅಥವಾ ಬೆಕ್ಕಿನ ದುರಾದೃಷ್ಟ ಎನ್ನಬೇಕೋ , ಇನ್ನೂ ಮೀನು ಆರಾಮಗಿ ಈಜುತ್ತಾ ಇದೆ. ಸರಿ ಮೀನಂತೂ ಹಿಡಿಯಲು ಆಗದು ,ಆದರೆ ಮೀನಿಗೆ ಹಾಕುವ ಆಹಾರವಿದೆಯಲ್ಲಾ ಅದನ್ನು ಉರುಳಿಸಿ ತಿನ್ನುವುದೆಂದರೆ ಬೆಕ್ಕಿಗೆ ಬಹಳ ಪ್ರೀತಿಯ ಕೆಲಸ. ಪಕ್ಕದಲ್ಲಿಯೇ ಇಲಿ ಹಾದುಹೋದರೂ ನೋಡದೆ ಬರಿ ಹಾಲು ಅನ್ನ ತಿನ್ನುವುದಷ್ಟೆ ಇದರ ಕೆಲಸ ಎನ್ನುವುದು ಅಮ್ಮನ ಉವಾಚ.ಈಗ ಹೇಳಿ ತಪ್ಪು ಬೆಕ್ಕಿನದೋ ಅಮ್ಮನದೊ?
Your cat is so cute!!
ReplyDeleteThis comment has been removed by the author.
Delete