ಯಾರಾದರೂ ಹಿರಿಯರನ್ನು ಕೇಳಿ,ಅವರು ಚಿಕ್ಕವರಿದ್ದಾಗ ಎಂದಾದರೂ ಮಾಲಿನ್ಯದ ಕಾರಣದಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತೆ ಎಂದು. ಅಥವಾ ನೀವೆ ಹಿರಿಯರಾಗಿದ್ದರೆ ನೀವೆ ಹೇಳಿ , ನೀವು ಚಿಕ್ಕವರಿದ್ದಾಗ ಇದ್ದ ಪರಿಚಿತ ಜೀವಿಗಳು ಇಂದು ನಮಗೇಕೆ ನೋಡಲು ಸಿಗುತ್ತಿಲ್ಲ? ನೀವು ಚಿಕ್ಕವರಿದ್ದಾಗ ಎಂದಾದರೂ ಮಲೆನಾಡಿನಲ್ಲಿ ನೀರಿಗೆ ಬರಗಾಲ ಬಂದಿತ್ತೆ? ಇಲ್ಲ ತಾನೆ? ಆದರೆ ಇವೆಲ್ಲವೂ ಇಂದು ನಡೆಯುತ್ತಿದೆ ಹಾಗು ನಿಮ್ಮ ಮುಂದಿನ ತಲೆಮಾರಿನ ನಾವು ಇವೆಲ್ಲಕ್ಕೂ ಸಾಕ್ಷಿಯಾಗಿದ್ದೇವೆ.
ನಮ್ಮ ಮನೆಯಲ್ಲಿಯೆ ಈ ಬಾರಿ ಒಂದು ದಿನಕ್ಕೆ ೩೧೫ಮೀಮೀ ಮಳೆ ಬಂದಿತ್ತು. ಇಷ್ಟು ವರ್ಷ ಜೂನ್ ನಲ್ಲಿ ಬರುತ್ತಿದ್ದ ಮಳೆ ತಡವಾಗುತ್ತಿದೆ. ಕೊಲಾರದಲ್ಲಿ ನೀರಿಗಾಗಿ ೧.೬ ಕೀಮೀ ಬೋರ್ವೆಲ್ಲ್ ಹೊಡೆಯುವ ಪರಿಸ್ಥಿತಿ ಬಂದಿದೆ. ಪ್ರತಿವರ್ಷ ಪ್ರವಾಹದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಇದ್ದ ಕೆರೆಗಳ ಮೇಲೆ ಕಟ್ಟಡಗಳು ಬಂದು ಕುಳಿತಿವೆ
ನೀವೆಲ್ಲರೂ ನಮಗೆ ಪಾಠ ಮಾಡುತ್ತೀರಿ, ಮರ ಕಡಿಯಬಾರದು, ನೀರನ್ನು ಹಿತಮಿತವಾಗಿ ಬಳಸಬೇಕು,ದುರಾಸೆ ಪಡಬೇಡ, ಪರಿಸರ ರಕ್ಷಣೆ ಮಾಡಬೇಕು ಎಂದು. ಆದರೆ ಯೋಚಿಸಿ ದೊಡ್ಡವರೆ, ನೀವೇನು ಮಾಡುತ್ತಿದ್ದೀರಿ? ನೀವು ನಿಮ್ಮ ಮುಂದಿನ ತಲೆಮಾರಿಗೆ ಏನು ಉಳಿಸುತ್ತಿದ್ದಿರಿ? ಬೋಳು ಗುಡ್ಡಗಳನ್ನೆ? ಕರಗಿದ ಹಿಮಕವಚಗಳನ್ನೆ? ಬಿಸಿಯಾದ ವಾತಾವರಣವನ್ನೆ?
ನಾವು ಮಾನವರ ದುರಾಸೆಯಿಂದ ಏನೆಲ್ಲಾ ಆಗಿದೆ .
ಆಫ಼್ರಿಕಾದ ಕೇಪ್ ಟೌನ್ನಲ್ಲಿ ನೀರು ಖಾಲಿಯಾಗಿದೆ. ಆದರೂ Antarctica ದ ಹಿಮವನ್ನು ಕರಗಿಸಿ ನೀರಾಗಿ ಬಳಸುವ ಪ್ರಯತ್ನ ನಡೆಯುತ್ತಿದೆ. ಸಮೃದ್ಧ ಕಾಡಗಿದ್ದ ಅಮೆಜ಼ಾನ್ನಲ್ಲಿ ಸರಿಸುಮಾರು ೭೬,೦೦೦ ಪ್ರದೇಶಗಳಲ್ಲಿ ಕಾಳ್ಗಿಚ್ಚು ಹಬ್ಬಿದೆ.ಇದು ಮೊದಲು ಯಾವಾಗಲಾದರೂ ಆಗಿತ್ತೆ? ಭೂಮಿಯನ್ನು ಮೊದಲ ಸ್ಥಿತಿಗೆ ತರುವ ಸಾಧ್ಯತೆ ಕೇವಲ ೫೦% ಉಳಿದಿದೆ. ನೀವು ಮಕ್ಕಳು ಮುಂದಿನ ಪ್ರಜೆಗಳು ಎನ್ನುತ್ತೀರಿ. ಹಾಗಾದರೆ ಮುಂದಿನ ಪ್ರಜೆಗಳಿಗೆ ಕೇವಲ ೫೦% ಭರವಸೆ ಸಾಕೆ?
ಭೂಮಿಯನ್ನು ಮೊದಲ ಪರಿಸ್ಥಿತಿಗೆ ತರಲು ಇನ್ನು ಕೆಲವೆ ವರ್ಷಗಳು ಉಳಿದಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಭರವಸೆ ಇನ್ನೂ ಇದೆ. ಅದಕ್ಕೆ ಪರಿಹಾರವನ್ನೂ ವಿಜ್ನಾನಿಗಳು ನಮ್ಮ ಮುಂದಿಟ್ಟಿದ್ದಾರೆ. ಅದಕ್ಕೆ ಮಾನವ ಪ್ರಯತ್ನವೂ ಬೇಕು ಅಷ್ಟೇ.ಇವುಗಳ ಪರಿಹಾರಕ್ಕಾಗಿ ಮಕ್ಕಳ ಸಂಘಟನೆಯೊಂದು ರೂಪುಗೊಂಡಿದೆ. ಅದೇ Fridays for Future.

೨೦೧೮, ಆಗಸ್ಟ್ ೨೦ ರಂದು ಪ್ರತಿಭಟನೆಗೆ ಕುಳಿತ
ಒಬ್ಬ ೧೪ ವರ್ಷದ ಹುಡುಗಿ ಗ್ರೇಟಾ ಥಂಬರ್ಗ್ ಳಿಂದ ವಿಶ್ವದಾದ್ಯಂತ ಅನೇಕ ಮಕ್ಕಳು ತಮ್ಮ ಭವಿಷ್ಯಕ್ಕಾಗಿ ಬೀದಿಗಿಳಿದರು. ಪ್ರತಿ ಶುಕ್ರವಾರ ಕೋಟ್ಯಂತರ ಮಕ್ಕಳು ತಮ್ಮ ಶಿಕ್ಷಕರ ಜೊತೆಗೆ ಪ್ರತಿಭಟನೆ ಮಾಡುತ್ತಾರೆ. ಕ್ಲೈಮೇಟ್ ಸಂಕಟಕ್ಕೆ ಕೊನೆ ಯಾವಾಗ ಎಂದು ನಾಯಕರನ್ನು ಪ್ರಶ್ನಿಸುತ್ತಾರೆ. ಪರಿಹಾರ ಕ್ರಮಗಳಿಗಾಗಿ ಒತ್ತಾಯ ಮಾಡುತ್ತಾರೆ. ಹಸಿರು ಗ್ರಾಹಕರಾಗಲು ಜನರಿಗೆ ಅರಿವು ಮೂಡಿಸುತ್ತಾರೆ. ಇವರು ಹೇಳುವುದಿಷ್ಟೇ: ವಿಜ್ಞಾನವನ್ನು ನಂಬಿ. ಪಳೆಯುಳಿಕೆ ಇಂಧನ ಕಡಿಮೆ ಮಾಡಿ. ಹಸಿರು ಬಳಕೆದಾರರಾಗಿ.

ಪಳೆಯುಳಿಕೆ ಇಂಧನ ಏಕೆ ಬೇಡ? :
ನಾವೆಲ್ಲರೂ ೬ನೇ ತರಗತಿಯಿಂದಲೇ ಕಲಿಯುತ್ತಾ ಬಂದಿದ್ದೇವೆ. ಆದರೂ ಮರೆತಿದ್ದೇವೆ. ಈ ಇಂಧನ ಉರಿಸುವುದರಿಂದ ಹಸಿರುಮನೆ ಅನಿಲಗಳು ( ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್, ನೈಟ್ರಸ್ ಆಕ್ಸೈಡ್, ಮೀಥೆನ್ ಇತ್ಯಾದಿಗಳು) ಬಿಡುಗಡೆ ಯಾಗುತ್ತದೆಯಲ್ಲ, ಅವುಗಳು ವಾತಾವರಣದಲ್ಲಿ ಸೇರಿ ಬಿಸಿಯುಂಟು ಮಾಡುತ್ತವೆ. ಅಷ್ಟೇ ಅಲ್ಲ ನಾವಿಂದು ಬಳಸುವ ಪ್ಲಾಸ್ಟಿಕ್ ಕೂಡ ಪಳೆಯುಳಿಕೆ ಇಂಧನಗಳಿಂದಲೇ ತಯಾರಾಗುವುದು. ಯೋಚಿಸಿ , ನಾವೊಂದು ವೇಳೆ
ಒಬ್ಬೊಬ್ಬರೂ ಒಂದೊಂದು ಕಾರು ಬಳಸುವ ಬದಲು, ನಾಲ್ಕು ಐದು ಜನರು ಒಟ್ಟಿಗೆ ಪ್ರಯಾಣಿಸಿದರೆ, ಅಥವಾ ಬಸ್ಸಿನಲ್ಲಿ ಸಂಚರಿಸಿದರೆ ಎಷ್ಟು ಪ್ರಮಾಣದ ಶಕ್ತಿ ಉಳಿತಾಯವಾಗಬಹುದು. ಈಗ ಪರ್ಯಾಯ ಇಂಧನವಾಗಿ ವಿದ್ಯುತ್ ಇದೆ. ವಿದ್ಯುತ್ ವಾಹನಗಳು ಲಭ್ಯವೂ ಇವೆ. ಇಷ್ಟೊಂದು ಪರಿಹಾರಗಳಿವಾಗ ನಮ್ಮ ಕಾರ್ಬನ್ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ನಾವೂ ಪ್ರಯತ್ನ ಮಾಡಬಲ್ಲೆವು ಅಲ್ಲವೆ?
ಈಗ ಕೊಳ್ಳುಬಾಕತನದ ಬಳಿ ಬರೋಣ. ನೀವೊಂದು ನೋಟ್ ಬುಕ್ ಖರೀದಿಸಲು ಸುಪರ್ ಮಾರ್ಕೆಟ್ಗೆ ಹೋದಿರಿ ಎಂದುಕೊಳ್ಳಿ. ಆಗ ಬರೀ ನೋಟ್ ಬುಕ್ ಒಂದೆ ಬರುವುದಿಲ್ಲ , ಜೊತೆಗೆ ಇನ್ನೂ ಹಲವು ಚಾಕಲೇಟ್, ಎಂದೂ ಬೇಕು ಎನಿಸಿದ್ದ ಬಣ್ಣದ ಪೆನ್ಸಿಲ್ ಳು ಬರುತ್ತವೆ. ಇದನ್ನೇ ಕೊಳ್ಳುಬಾಕತನ ಎನ್ನುವುದು.ಇದನ್ನು ನಾವು ಸ್ವಲ್ಪ ಮಟ್ಟಿಗೆ ಯಾದರೂ ನಿಯಂತ್ರಿಸಲು ಸಾಧ್ಯವಿದೆ ಅಲ್ಲವೆ?

ಇಂತಹ ವಿಷಯಗಳ ಬಗ್ಗೆ ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ ಅದರಿಂದ ಏನು ಬದಲಾವಣೆ ಆದಂತೆ ಕಾಣುತ್ತಿಲ್ಲ. IPCC ವಿಜ್ಞಾನಿಗಳ ಪ್ರಕಾರ ಉಧ್ಯಮಪೂರ್ವ ಮಟ್ಟಕ್ಕಿಂತ ೨.೧ ಡೀಗ್ರೀ ಸೆಲ್ಸಿಯಸ್ ತಾಪಮಾನ ಏರಿದರೆ ಭೂಮಿ ಎಂದಿಗೂ ಸರಿಪಡಿಸಲಾಗದ ಸ್ಥಿತಿಗೆ ಬರುತ್ತದೆ.
ಈ ಚಳುವಳಿಗೆ ಸಹಕಾರ ಕೊಡುವವರು ಇದ್ದಷ್ಟೆ ವಿರೋಧಿಗಳೂ ಇದ್ದಾರೆ. ಮಕ್ಕಳು ಶುಕ್ರವಾರ ರಜೆ ಸಿಗುತ್ತೆ ಎಂಬ ಕಾರಣಕ್ಕೆ ಪ್ರತಿಭಟನೆ ಮಾಡುತ್ತಾರೆ, ಇವರಿಗೆ ಎಕಾನಮಿ ಗೊತ್ತಿಲ್ಲ ಎಂದೆಲ್ಲಾ ಹೀಗೆಳೆಯುವವರಿಗೆ ಇದೇ ಮಕ್ಕಳು ತಮ್ಮ ಬೇಸಿಗೆ ರಜೆಯಲ್ಲಿಯೂ ಪ್ರತಿಭಟನೆ ಮಾಡಿದ್ದು ಕಾಣುತ್ತಿಲ್ಲವೇನೊ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ತಮ್ಮ ಮನೆಯಲ್ಲಿಯೆ ಡಿಜಿಟಲ್ ಪ್ರತಿಭಟನೆಯೂ ಕಾಣುವುದಿಲ್ಲ.

ಸಂಘಟನೆಯನ್ನು ಹೀಗೆಳೆಯುವವರು ಒಂದು ಕಡೆಯಾದರೆ, ಕ್ಲೈಮೇಟ್ ಚೇಂಜ್ ಎಂಬುದೇ ಸುಳ್ಳು ಎನ್ನುವವರು ಒಂದು ಕಡೆ. ಈಗ ಆಗುತ್ತಿರುವ ಬದಲಾವಣೆಗಳು 6th mass extinction ನ ಪರಿಣಾಮ ಎನ್ನುವವರೂ ಇದ್ದಾರೆ. ಆದರೆ mass extinction ಆಗಲು ಕಾರಣ ಬೇಕಲ್ಲವೆ?
ಒಂದು ಸಮೀಕ್ಷೆಯ ಪ್ರಕಾರ ೯೭% ವಿಜ್ನಾನಿಗಳು ಕ್ಲೈಮೇಟ್ ಚೇಂಜ್ ಆಗುತ್ತಿದೆ ಎಂಬುದನ್ನು ಒಪ್ಪಿದ್ದಾರೆ. ಇದಕ್ಕೆ ಲಕ್ಷಣಗಳನ್ನು ತೋರಿಸಿದ್ದಾರೆ:
- ಅಂಟಾರ್ಕ್‍ಟಿಕ ಖಂಡದಲ್ಲಿ ನ ಒಂದು ಭಾಗದಲ್ಲಿ ಬಿರುಕು ಮೂಡಿದೆ.
- ಸಮುದ್ರ ಮಟ್ಟದ ಏರಿಕೆ
- ಪ್ರವಾಹಗಳು ಹೆಚ್ಚುತ್ತಿವೆ ಮತ್ತು ಅದರ ಪ್ರಭಾವವೂ ಹೆಚ್ಚಾಗಿದೆ.
- ನದಿಗಳು ಬತ್ತುತ್ತಿವೆ.
- ಸುಮಾರು ೨೦೦ ಜೀವ ಪ್ರಭೇದಗಳು ಪ್ರತಿದಿನವೂ ನಾಶವಾಗುತ್ತಿವೆ.
ಈಗ Fridays for future ಸಂಘಟನೆ ಪೆಟ್ರೊಲ್ ಉದ್ದಿಮೆದಾರರಿಗೆ ಭಯ ತರುತ್ತಿದೆ. ಇಡಿ ಜಗತ್ತು ಅವರ ಪೆಟ್ರೊಲ್ ಮೇಲೆ ಅವಲಂಬಿತವಾಗದೆ ಪರ್ಯಾಯ ಇಂಧನ ಬಂದುಬಿಟ್ಟರೆ ಶ್ರೀಮಂತ ದೇಶಗಳ ಮೇಲೆ ಇರುವ ಅವರ ಹಿಡಿತ ಕೈ ತಪ್ಪಿ ಹೋಗುತ್ತದೆ ಎಂಬ ಭಯವಿದೆ ಅವರಲ್ಲಿ.
ನಿಮಗೆ ನಿಮ್ಮ ಮುಂದಿನ ತಲೆಮಾರಿನ ಬಗ್ಗೆ ಕಾಳಜಿ ಇದ್ದರೆ, ನಮ್ಮ ಪೂರ್ವಜರಿಂದ ಹೀಗಾಯಿತು ಎಂದು ನಾವು ಹೇಳಿಸಿಕೊಳ್ಳಬಾರದು ಎಂದಿದ್ದರೆ ನಾವು ಬದಲಾಗಬೇಕು. ನಾವೆಲ್ಲರೂ ಬದಲಾಗಬಹುದು, ನಮಗಾಗಿ ಮತ್ತು ನಮ್ಮ ಭೂಮಿಗಾಗಿ!
Comments
Post a Comment