ಮಲೆನಾಡಿನಲ್ಲಿ ಮಳೆಗಾಲ ಎಂದರೆ ಒಂದು ರೀತಿಯಲ್ಲಿ ಹೊಸ ವರ್ಷದ ಪ್ರಾರಂಭ. ಮಕ್ಕಳಿಗೆ ಶಾಲೆ ಶುರುವಾಗುವ ಸಮಯ, ರೈತರಿಗೆ ಗದ್ದೆ ನೆಟ್ಟಿಯ ಸಮಯ, ಹೊಸ ಕೊಡೆ, ಕಂಬಳಿ ಕೊಪ್ಪೆ, ರೈನ್ ಕೋಟುಗಳು ಊರುತುಂಬಾ ಓಡಾಡುವ ಸಮಯ.
ಮಳೆಗಾಲ ಶುರುವಾಗುತ್ತಿದ್ದಂತೆ ಅದೆಲ್ಲಿಂದಲೋ ಬಸವನ ತಲೆ ಹೂವು, ನಾಗದಾಳಿ ಹೂವು, ಕೆಂಪು , ಬಿಳಿ ಬಣ್ಣದ ರೈನ್ ಲಿಲಿಗಳು ಎಲ್ಲವು ಪ್ರತ್ಯಕ್ಷವಾಗುತ್ತವೆ. ಒಣಗಿದ್ದ ನೆಲದಲ್ಲಿ ಹುಲ್ಲು ನಿಧಾನವಾಗಿ ಬೆಳೆದು ಹಸಿರಾಗುತ್ತದೆ. ಮಾವಿನ ಹಣ್ಣಿನ ಕಾಲ ಮುಗಿದು ಹಲಸಿನ ಕಾಲ ಶುರುವಾಗುತ್ತದೆ.
"ಈ ವರ್ಷ ಅಡಿಕೆಗೆ ಕೊಳೆ ಬಂದೊತೊ ಮಾರಾಯ" ಎಂಬ ಮಾತುಗಳು ಸಾಮಾನ್ಯ. "ಹೊಸ ಶಾಲೆ ಬ್ಯಾಗು ಬೇಕಾಗಿತ್ತು" , "ನನ್ನ ಕೊಡೆ ಅವ ಮುರಿದು ಹಾಕ್ಬುಟ" ಎಂಬ ದೂರುಗಳು ಶಾಲೆಗಳನ್ನು ತುಂಬಿರುತ್ತವೆ. ಇವೆಲ್ಲಾ ನಮ್ಮೂರಿನವರಿಗೆ ಬಹಳ ಪರಿಚಿತವಾದದ್ದು.
ಮಳೇಗಾಲದ ಟೈಮ್ ಟೇಬಲ್ ಪ್ರಕಾರ ಮೊದಲ ಒಂದೆರಡು ವಾರಗಳಲ್ಲಿ ಒಂದು ಜ್ವರವೋ, ನೆಗಡಿಯೋ ಆಗಿ ಮುಗಿಯಬೇಕು ನಂತರದ ಅಗಸ್ಟ್ ತಿಂಗಳಲ್ಲಿ ಒಮ್ಮೆ ಭಾರಿ ಮಳೆಯಾಗಿ ಹೊಳೆ ಹತ್ತಿ ಬಂದು ವಾರಗಳ ಕಾಲ ಇಂಟರ್ನೆಟ್ , ಸಿಗ್ನಲ್ಲು ಕರೆಂಟ್ ಏನೂ ಇಲ್ಲದೇ ಶಾಲೆಗಳು, ಆಫ಼ೀಸುಗಳು ಎಲ್ಲವು ಮುಚ್ಚಿ ಕೂರಬೇಕು. ಈ ಹೊಳೆ ಬೇಗ ಹತ್ತಿ ಬರಲೆಂದು ಎಲ್ಲಾ ಮಕ್ಕಳ ಪ್ರಾರ್ಥನೆ. ಹೀಗಾಗಿ ನಮಗೆ ಮಳೆಗಾಲವೇ ಲಾಕ್ ಡೌನ್.
ಹೊಳೆ ಹತ್ತಿ ಬಂದಾಗ ಮೊಬೈಲು, ಟಿವಿ ಏನೂ ಇಲ್ಲದೇ ಹಳೆ ದೇವರ ಪಾದವೇ ಗತಿ ಎಂಬಂತೆ ರೆಡಿಯೋ ಮಾತಾಡಲು ಶುರು ಮಾಡುತ್ತದೆ. ಮನರಂಜನೆಗಾಗಿ ಹೊಳೆ ನೋಡಲು ಮಕ್ಕಳು, ದೊಡ್ಡವರು ಎನ್ನದೇ ಎಲ್ಲರೂ ಬರುತ್ತಾರೆ. "ಹಿಂದಿನ ವರ್ಷ ಇನ್ನೂ ಹೆಚ್ಚು ಹತ್ತಿತ್ತಾ, ಅಲ್ನೋಡು ಅದೇ ಅಲ್ಲಿ ಗುರುತು ಹಾಕಿಟ್ಟಿದಿದ್ದ್ಯ " ಎನ್ನುವ ಹೊಳೆಯ ಖಾಯಮ್ ವೀಕ್ಷಕರು, ಹೊಳೆಯಲ್ಲಿ ತೇಲಿ ಬರುವ ತೆಂಗಿನಕಾಯಿ ಹಿಡಿಯುವ ಜನರು, ಅವರು ಒಂದೊಂದು ತೆಂಗಿನಕಾಯಿ ಹಿಡಿದಾಗಲೂ ಯಾವ ಕ್ರಿಕೆಟ್ ಕಾಮೆಂಟರಿ ಮಾಡುವವರಿಗೂ ಕಮ್ಮಿ ಇಲ್ಲದಂತೇ ಕಾಮೆಂಟರಿ ಮಾಡುವವರು, ಆ ಜಾರುವ ನೆಲದಲ್ಲಿಯೂ ಬೈಕು ಓಡಿಸಲು ಹೋಗಿ ಕೈಕಾಲು ಮುರಿದುಕೊಳ್ಳುವ ಸಾಹಸಿಗಳು, ಅಪರೂಪಕ್ಕೆ ಸಿಗುವ ಸಂಬಂಧಿಕರು, "ಸರಕುಳಿಯಲ್ಲಿ ಹೆಬ್ಬಾವು ಬಂದಿತ್ತಡ" ಎಂದೆಲ್ಲಾ ಗಾಳಿಸುದ್ದಿಯ ಪ್ರಚಾರಕರು ಹೀಗೇ ಎಲ್ಲರೂ ನೆರೆದಿರುತ್ತಾರೆ. ಇದೂ ಒಂಥರಾ ಹಬ್ಬವೆ!
ಇನ್ನು "ಅತ್ಗೆ ನಂಗೆ ಆ ಕೆಂಪಿ ಡೇರೆ ಹೂವಿನ ಬುಡ ಕೊಡೆ" ಎಂದು ಆಗಲೆ ಎಲ್ಲರ ಬೈಕು, ಕಾರುಗಳ ಮೇಲೆ ಹೂವಿನ ಗಿಡಗಳು, ಹೊಸದಾಗಿ ತಂದ ಅಡಿಕೆ ಸಸಿಗಳು, ತರಕಾರಿ ಸಸಿಗಳು ಓಡಾಡಲು ಶುರು.
. ಯಾರ ಮನೆಯಲ್ಲಿ ಏನೆ ಕಾರ್ಯಕ್ರಮ ಇದ್ದರೂ ಎಲ್ಲರೂ ಹೊರಡುವಾಗ ತಮ್ಮ ಬಳಿ ಇಲ್ಲದ ಒಂದೊಂದು ಹೂವಿನ ಸಸಿಗಳನ್ನು ತೆಗೆದುಕೊಂಡು ಹೋಗೇ ಹೋಗುತ್ತಾರೆ. ನರ್ಸರಿಗಳಲ್ಲಿ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ!
ಇನ್ನು ಶಾಲೆಯ ವಿಷಯಕ್ಕೆ ಬಂದರೆ , ಹೊಸ ಪಟ್ಟಿ, ಪುಸ್ತಕ, ವನಮಹೋತ್ಸವ, ಹೊಸದಾಗಿ ಬಂದ ಒಂದನೇ ತರಗತಿಯ ಮಕ್ಕಳು, "ಈ ವರ್ಷ ಕನ್ನಡ ಪುಸ್ತಕ ಬಂಜೆ ಇಲ್ಯಾ" ಎನ್ನುವ ಮಕ್ಕಳು, ಪ್ರತಿಭಾ ಕಾರಂಜಿಗಾಗಿ ನೃತ್ಯ, ಹಾಡು, ಎಂದೆಲ್ಲ ತಯಾರಿ ನಡೆಸುವ ಮಕ್ಕಳು, ಹಾಡನ್ನು ಹಾಡುವ ದಿನವೇ ದ್ವನಿ ಬಿದ್ದು ಪೇಚಿಗೆ ಸಿಲುಕುವವರು, ಚಿತ್ರಕಲೆ ಸ್ಪರ್ಧೆಯಲ್ಲಿ ಬಣ್ಣವನ್ನು ಹಾಳೆಯ ಮೇಲೆ ಚೆಲ್ಲಿಕೊಂಡು ಪರಿತಪಿಸುವವರು ಎಲ್ಲರೂ ಸಿಗುತ್ತಾರೆ.
ಮಳೆಗಾಲದಲ್ಲಿ ಬಿಕ್ಕೆ ಹಣ್ಣು ಹೆಕ್ಕಲು ಅಲೆಯುವುದು, ಗಮಟೆಕಾಯಿ, ಧೂಪದ ಕಾಯಿಗಾಗಿ ಊರು ಅಲೆಯುವುದು, ಕೊಡೆ ಮರೆತು ಮಳೆಯಲ್ಲಿ ನೆನೆದುಕೊಂಡು ಬರುವುದು, ಚೌತಿ ಹಬ್ಬದಲ್ಲಿ ಮುಳುಗಿಸಿದ ಗಣಪತಿ ಮೂರ್ತಿಯಿಂದ ಇಲಿ ಮತ್ತು ಹಾವು ತೆಗೆದು ಇಟ್ಟುಕೊಳ್ಳುವುದು, ಎಲ್ಲವೂ ಮಳೆಗಾಲದ ಅವಿಭಾಜ್ಯ ಅಂಗಗಳೆ.
ಬೇಸಿಗೆಯಲ್ಲಿಯೇ ಮಾಡಿಟ್ಟ ಹಪ್ಪಳ, ಸಂಡಿಗೆಗಳು ಮಳೆಗಾಲದಲ್ಲಿ ಹೊರಬರುತ್ತವೆ. ಸುಟ್ಟ ಹಲಸಿನ ಬೇಳೆ, ಬಿಸಿಲಲ್ಲಿ ತಿರುಗಿ ಹುಡುಕಿದ ಗೇರುಬೀಜಗಳ ಸೀಸನ್ ಶುರುವಾಗುತ್ತದೆ. ಮಳೆಗಾಲವೆಂದರೆ ಎಲ್ಲರಿಗೂ ಒಂದು ಉತ್ಸವವೇ!
ಮಳೆಗಾಲ ಮುಗಿಯುತ್ತಿದ್ದಂತೆ ನಿಧಾನವಾಗಿ ವಾತಾವರಣ ಸ್ವಲ್ಪೆ ಸ್ವಲ್ಪ ಬೆಚ್ಚಗಾಗುತ್ತದೆ. ಹಣ್ಣುಗಳು ಮುಗಿದು ಕೆಲ ಮರಗಳು ಎಲೆ ಉದುರಿಸಲು ಶುರು ಮಾಡುತ್ತವೆ. ಮಳೆಗಾಲದ ವೈಭವ ಮುಗಿದು ಚಳಿಗಾಲದ ಸ್ಪೆಷಲ್ ಕಂಬಳಿಗಳು ಹೊರಬೀಳುತ್ತವೆ.
ಲೇಖನ ಓದುತತಿದ್ದಂತೆ ಒಮ್ಮೆ ತೇಜಸ್ವಿ ನೆನಪಾದರು... ಜೊತೆಯಲ್ಲೆ ನನ್ನ ಬಾಲ್ಯದ ದಿನಗಳು ಕೂಡ.. ಈ ತರದ ಬರವಣಿಗೆಗಳನ್ನ ಓದಿದಾಗೆಲ್ಲ " ಯಾವುದನ್ನೋ ಪಡೆಯುವುದಕ್ಕೆ ಎಷ್ಟೊಂದನ್ನ ಕಳೆದು ಕೊಳ್ಳುತ್ತಿದ್ದೇವೆ" ಎಂದೆನಿಸುತ್ತದೆ... ಏನೇ ಇರಲಿ ವನ್ಯ ಲೇಖನ ಓದಿದ ಮೇಲೆ ಏನೋ ಬರೆಯಬೇಕು ಅನ್ನುವ ಹಂಬಲ ವಾಗಿದ್ದೆಂತು ನಿಜ... ಖುಷಿ ಆಯ್ತು ನಮ್ಮೂರಿನ ನೆನಪುಗಳನ್ನ ಕಟ್ಟಿ ಕೊಟ್ಟಿದ್ದಕ್ಕೆ.. ಧನ್ಯವಾದಗಳು...
ReplyDelete- ಗುರು ಹೂಡ್ಲಮನೆ
Thank you
Delete