ಈ ಪುಸ್ತಕವನ್ನು ನಾನು ಅದೆಷ್ಟು ಸರಿ ಓದಿದ್ದೆನೋ ಗೊತ್ತಿಲ್ಲ . ಒಂದು ನೂರು ಸಾರಿಯಾದರೂ ಆಗಿರಬಹುದೇನೊ! ಮೊದಲು ಓದಿದಾಗ ಹೇಗೆ ನಕ್ಕಿದ್ದೆನೋ ಹಾಗೆಯೆ ಈಗ ಓದಿದರೂ ನಗಿಸುತ್ತದೆ ಈ ಪುಸ್ತಕ. ಇದು ಒಂದು ರೀತಿಯಲ್ಲಿ ತೇಜಸ್ವಿಯವರ ಆತ್ಮಕಥೆಯೂ ಹೌದು, ಕುವೆಂಪು ಅವರ ವೈಯಕ್ತಿಕ ಜೀವನದ ಕತೆಯೂ ಹೌದು.
ಇಡಿ ಪುಸ್ತಕದ ಪೂರ್ವಾರ್ಧ ಅಣ್ಣನ ನೆನಪಾಗಿ ಉಳಿದರೆ ಇನ್ನರ್ಧ ಭಾಗ ಶಾಮಣ್ಣ, ಬಿಎಸ್ ಆಚಾರ್ಯ. ಮುಂತಾದವರ 'ಮಾರ್ವೆಲಸ್ ' ಪೇಚಿನ ಕಥೆಗಳು ಬರುತ್ತವೆ. ಒಂದು ಸರಳ ,ಸೈಕಲ್ ಲೈಸೆನ್ಸ್ ಇಲ್ಲದೆ ಓಡಾಡಿದ್ದರ ಕೇಸು ನ್ಯಾಯಾಲಯಕ್ಕೆ ಹೋಗಿ ಬಂದದ್ದರ ಕಥೆ, ಅಲ್ಲಿಯೇ ಬರುವ ಪೋಲಿಸ ಪೀಟರ್ ರಾಣಿ, ಶಾಮಣ್ಣನ ಸಂಗೀತದ ಹುಚ್ಚಿನ ಅವಾಂತರ, ದಂತವಾದ್ಯ, ಬುಲ್ ಬುಲ್ ತರಂಗ್, ಸ್ಕೂಲಿನಿಂದ ಪರಾರಿ, ನಾಯಿಯ ಬಾಲ ಮುರಿದದ್ದು... ಇಂತಹ ಘಟನೆಗಳು ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕು ಅನ್ನಿಸುವಂತೆ ಮಾಡುತ್ತದೆ. ಬಿಎಸ್ ಆಚಾರ್ಯ ರ ಕವಿಗಳ ಫೊಟೊ ಸಂಗ್ರಹ ಮಾಡುವ ಮಾರ್ವೆಲಸ್ ಐಡಿಯಾ ಕೊನೆಗೆ ಕ್ಯಾಮೆರಾ ಕಳ್ಳತನದೊಂದಿಗೆ ಮುಗಿದದ್ದು, ಜವಹರಲಾಲ್ ನೆಹರುಗೂ ಸೈಕಲ್ ಗಲಾಟೆಗೂ ಇರುವ ಸಂಬಂಧ ತಿಳಿಯದೇ ಪೆಚ್ಚಾಗಿದ್ದು, ಸೆಂಟ್ ವಾಲಾನೊಬ್ಬ ಕುವೆಂಪುರವರಿಗೆ ಯಾವುದೋ ಸೆಂಟು ಹಚ್ಚಿ ದಿನವಿಡಿ 'ಕಸ್ತೂರಿ ಮೃಗದಂತೆ' ಗಮ ಬೀರುತ್ತಾ ಓಡಾಡಿದ್ದು, ಇಂಗ್ಲಿಶ್ ಪರೀಕ್ಷೆಯಲ್ಲಿ He ಬರೆಯಲು hi ಎಂದು ಬರೆದು ಫೇಲಾಗಿ ಬೈಸಿಕೊಂಡಿದ್ದು ಎಲ್ಲಾ ಘಟನೆಗಳು ನಮ್ಮೊಂದಿಗೇ ನಡೆಯುತ್ತಿ ದೆಯೆನೋ ಎನ್ನುವ ಹಾಗೆ ಭಾಸವಾಗುತ್ತದೆ.
ನನಗೆ ಅತಿ ಇಷ್ಟವಾದದ್ದು ಸಂಗೀತದ ಹುಚ್ಚಿನ ಕಥೆಗಳು. ಗ್ರಾಮಫೋನಿಂದ ಸಂಗೀತ ಕಲಿಯಲು ಹೋಗಿ ಮನೆಯ ಸಿಮೆಂಟ್ ಉದುರಲು ಶುರುವಾದದ್ದು, ಶಹನಾಯಿ ವಾದನವನ್ನು ಕಲಿಯುವಾಗ ನಾಯಿಗಳು ಕೈಜೋಡಿಸಿದ್ದು,ಶಾಮಣ್ಣನ ಹಲ್ಲಿನಿಂದ ಸಂಗೀತ ಹೊರಡಿಸುವ ಪ್ರಯತ್ನದ ಫಲ ದಂತವಾದ್ಯ, ಅದರಿಂದ ಶುರುವಾದ ಹಲ್ಲುನೋವು ಎಲ್ಲವೂ ಈ ಪುಸ್ತಕವನ್ನು ಇಷ್ಟದ ಅದರಲ್ಲೂ ಮಕ್ಕಳಿಗೆ ಇಷ್ಟವಾಗುವಂತೇ ಮಾಡುತ್ತದೆ.
ಮೋದಲು ಲಂಕೇಶ್ ಪತ್ರಿಕೆಗಾಗಿ ಈ ಕಥೆಗಳ ಸರಣಿಯನ್ನು ಬರೆದಿದ್ದರು ಎನ್ನುವ ಮಾಹಿತಿಯೂ ಇದೆ
ಅದೇನೆ ಇರಲಿ , ಅವರು ಚಿಕ್ಕವರಿದ್ದಾಗ ನಾಯಿಮರಿಯ ಬಾಲ ಮುರಿದು ' ನಾಯಿ ಜಾತಿಯಿಂದ ಜಾತಿ ನಾಯಿ'ಯನ್ನಾಗಿ ಮಾಡಿದ ಕಥೆ ನನ್ನನ್ನು ನಾಯಿ ಸಾಕುವಂತೆ ಪ್ರೇರೇಪಿಸಿದ್ದಂತು ನಿಜ.
ಒಟ್ಟಿನಲ್ಲಿ ಹೇಳುವುದಾದರೆ ಈ ಪುಸ್ತಕ ಒಂದು ಆತ್ಮಕಥೆಯಲ್ಲದ ಆತ್ಮಕಥೆ.
ತುಂಬಾ ಛಂದ ಆಯ್ದೇ ವನ್ಯಾ.
ReplyDeleteThank you
Delete